ಇಸ್ರೇಲ್‍ನಿಂದ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆ
ನ್ಯೂಯಾರ್ಕ್ : ಈ ವಾರ ಲೆಬನಾನ್‍ನಲ್ಲಿನ ಹಣಕಾಸು ಸಂಸ್ಥೆಯ ಮೇಲೆ ಇಸ್ರೇಲ್ ನಡೆಸಿದ ಸರಣಿ ಬಾಂಬ್ ದಾಳಿಗಳು ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿಯಲ್ಲಿ ನಾಗರಿಕ ವಸ್ತುಗಳ ಮೇಲಿನ ಅಕ್ರಮ ದಾಳಿಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪರೋಕ್ಷವಾಗಿ ಮಿಲಿಟರಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರೂ, ಆರ್ಥಿಕ ಮೂಲಸೌಕರ್ಯದ ಮೇಲಿನ ದಾಳಿಗಳು ಅಕ್ರಮವಾಗಿವೆ ಎಂದು `ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ಪ್ರಚಾರ ಮತ್ತು ರಕ್ಷಣೆಯ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಬೆನ್ ಸೌಲ್ ಹೇಳಿದ್ದಾರೆ.
ಸಶಸ್ತ್ರ ಸಂಘರ್ಷದ ಸಂದರ್ಭ ಮಿಲಿಟರಿ ಉದ್ದೇಶಗಳ ಮೇಲೆ ಮಾತ್ರ ದಾಳಿ ನಡೆಸಬಹುದು (ಅದರ ನಾಶವು ನಿರ್ದಿಷ್ಟ ಮಿಲಿಟರಿ ಪ್ರಯೋಜನವನ್ನು ನೀಡುತ್ತದೆ ಎಂದಾದರೆ ಮಾತ್ರ). ಎದುರಾಳಿಯ ಆರ್ಥಿಕ ಚಟುವಟಿಕೆಗಳು ಮಿಲಿಟರಿ ಕಾರ್ಯಾಚರಣೆಗೆ ಸಮರ್ಥನೆ ನೀಡುವುದಿಲ್ಲ. ಬ್ಯಾಂಕ್‍ಗಳ ಮೇಲಿನ ದಾಳಿಗಳು ನಾಗರಿಕ ವಸ್ತುಗಳು ಮತ್ತು ಮಿಲಿಟರಿ ಉದ್ದೇಶಗಳ ನಡುವಿನ ವ್ಯತ್ಯಾಸವನ್ನು (ಇದು ನಾಗರಿಕರನ್ನು ಹಿಂಸೆಯಿಂದ ರಕ್ಷಿಸಲು ಮೂಲಭೂತವಾಗಿದೆ) ಅಳಿಸಿಹಾಕುತ್ತದೆ. ಇದು ನಾಗರಿಕ ಸಮುದಾಯದ ಮೇಲಿನ ಸಂಪೂರ್ಣ ಯುದ್ಧಕ್ಕೆ ಬಾಗಿಲು ತೆರೆಯುತ್ತದೆ. ಹೀಗಾದಾಗ ಹೋರಾಟವು ಮಿಲಿಟರಿ ಅಪಾಯಕಾರಿ ಗುರಿಗಳ ಮೇಲಿನ ದಾಳಿಗೆ ಸೀಮಿತವಾಗಿರುವುದಿಲ್ಲ. ಇಂತಹ ದಾಳಿಗಳು ಬದುಕುವ ಹಕ್ಕನ್ನು ನಾಶಗೊಳಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಅಲ್-ಖರ್ದ್ ಅಲ್-ಹಸನ್ ಬ್ಯಾಂಕ್ ಹಿಜ್ಬುಲ್ಲಾಗೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದ್ದು ಸಂಸ್ಥೆಯ ಕಚೇರಿಗಳ ಮೇಲಿನ ದಾಳಿಗೂ ಮುನ್ನ ಸಾರ್ವಜನಿಕ ಎಚ್ಚರಿಕೆ ನೀಡಿತ್ತು. ಲೆಬನಾನ್‍ನಾದ್ಯಂತ ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಕಡಿಮೆ ಪ್ರಮಾಣದಲ್ಲಿ ಬಡ್ಡಿ ರಹಿತ ಸಾಲ ಒದಗಿಸುತ್ತಿತ್ತು ಮತ್ತು ದತ್ತಿ ಚಟುವಟಿಕೆಗಳನ್ನು ನಡೆಸುತ್ತಿತ್ತು. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ತಕ್ಷಣ ಕದನ ವಿರಾಮಕ್ಕೆ ಸೌಲ್ ಸೇರಿದಂತೆ ವಿಶ್ವಸಂಸ್ಥೆ ಅಧಿಕಾರಿಗಳು ಆಗ್ರಹಿಸಿದ್ದಾರೆ.