ಪಾಶ್ಚಿಮಾತ್ಯರಿಂದ ಬೂಟಾಟಿಕೆ : ಫೆಲೆಸ್ತೀನ್ ರಾಯಭಾರಿ ಆರೋಪ
ಟೋಕಿಯೊ: ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ವೀಕ್ಷಿಸಲು ಪಾಶ್ಚಿಮಾತ್ಯರು ಕಿರಿದಾದ ಮಸೂರವನ್ನು ಬಳಸಿ ಬೂಟಾಟಿಕೆ ನಡೆಸುತ್ತಿದ್ದಾರೆ ಎಂದು ಜಪಾನ್ ನಲ್ಲಿ ಫೆಲೆಸ್ತೀನ್ ರಾಯಭಾರಿ ವಲೀದ್ ಸಿಯಾಮ್ ಆರೋಪಿಸಿದ್ದಾರೆ.
ಇಸ್ರೇಲಿ-ಫೆಲೆಸ್ತೀನಿಯನ್ ಸಂಘರ್ಷದ ಬಗ್ಗೆ ಉಲ್ಲೇಖಿಸಲು ನಾನು ಬಯಸುತ್ತೇನೆ. ಕೆಲವರು ಕಿರಿದಾದ ಮಸೂರ ಬಳಸಿ, ಕೇವಲ ಇತ್ತೀಚಿನ ಹಿಂಸಾಚಾರವನ್ನು ಮಾತ್ರ ಗಮನಿಸುತ್ತಿದ್ದಾರೆ. ಫೆಲೆಸ್ತೀನಿಯನ್ ಜನತೆ ಒಂದರ ಹಿಂದೊಂದರಂತೆ ಮಾರಣಾಂತಿಕ ವರ್ಷಗಳನ್ನು ಅನುಭವಿಸುತ್ತಾ ಬಂದಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಹಿಂಸಾಚಾರ ಮತ್ತು ಸಂಘರ್ಷ ಉಲ್ಬಣಕ್ಕೆ ಇಸ್ರೇಲ್ ನ ಜತೆಗೆ ಅಂತರಾಷ್ಟ್ರೀಯ ಸಮುದಾಯವನ್ನೂ ಹೊಣೆಯಾಗಿಸಬೇಕು. ವಿಶೇಷವಾಗಿ ಇಸ್ರೇಲ್ ಸೇನೆಯ ಆಕ್ರಮಣವನ್ನು ಬೆಂಬಲಿಸಿದ ಮತ್ತು ಅನ್ಯಾಯಗಳನ್ನು ಶಾಶ್ವತಗೊಳಿಸಿದ ರಾಷ್ಟ್ರಗಳನ್ನು’ ಎಂದವರು ಹೇಳಿದ್ದಾರೆ.
ಗಾಝಾದಲ್ಲಿ ಫೆಲೆಸ್ತೀನೀಯರು ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ವಿದ್ಯುತ್, ನೀರು, ವೈದ್ಯಕೀಯ ನೆರವಿನ ಕೊರತೆಯ ಸಮಸ್ಯೆಯ ಸುಳಿಯಲ್ಲಿದ್ದಾರೆ. ಕಾನೂನುಬದ್ಧ ಆತ್ಮರಕ್ಷಣೆಯ ಹೆಸರಲ್ಲಿ ನಾಗರಿಕರ ಮರಣದಂಡನೆಗೆ ನಾವು ಸಾಕ್ಷಿಯಾಗಿದ್ದೇವೆ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಆಕ್ರಮಣಕಾರರು ಆತ್ಮರಕ್ಷಣೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ವಲೀದ್ ಸಿಯಾಮ್ ಹೇಳಿದ್ದಾರೆ.