ಐಸಿಸಿ ವಾರಂಟ್ ಜಾರಿಗೆ ಕೋರಿಕೆ ಐತಿಹಾಸಿಕ ಅವಮಾನ : ಇಸ್ರೇಲ್, ಹಮಾಸ್ ಖಂಡನೆ

Update: 2024-05-21 15:32 GMT

PC : X/@Currentreport1

ರಫಾ: ಗಾಝಾ ಪಟ್ಟಿಯಲ್ಲಿ ಭೀಕರ ಸಂಘರ್ಷದಲ್ಲಿ ನಿರತರಾಗಿರುವ ಇಸ್ರೇಲ್ ಮತ್ತು ಹಮಾಸ್, ಯುದ್ಧಾಪರಾಧಕ್ಕಾಗಿ ತಮ್ಮ ಮುಖಂಡರ ಬಂಧನಕ್ಕೆ ಐಸಿಸಿ ವಾರಂಟ್ ಜಾರಿಗೊಳಿಸಲು ನಡೆಯುತ್ತಿರುವ ಪ್ರಯತ್ನವನ್ನು ತಿರಸ್ಕರಿಸುವುದಾಗಿ ಹೇಳಿವೆ.

ಗಾಝಾ ಸಂಘರ್ಷದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು, ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್, ಹಮಾಸ್ ಮುಖಂಡರಾದ ಯಾಹಿಯಾ ಸಿನ್ವರ್, ಮುಹಮ್ಮದ್ ದೆಯಿಫ್ ಮತ್ತು ಇಸ್ಮಾಯಿಲ್ ಹನಿಯೆಹ್ ಅವರ ಕೃತ್ಯಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದ್ದು ಯುದ್ಧಾಪರಾಧಕ್ಕೆ ಇವರನ್ನು ಹೊಣೆಯಾಗಿಸಬೇಕು ಎಂದು ಆಗ್ರಹಿಸಿರುವ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದ ಮುಖ್ಯ ಅಭಿಯೋಜಕ ಕರೀಮ್ ಖಾನ್, ಈ ಮುಖಂಡರ ಬಂಧನಕ್ಕೆ ವಾರಂಟ್ ಜಾರಿಗೊಳಿಸಬೇಕೆಂದು ಕೋರಿ ಐಸಿಸಿಗೆ ಅರ್ಜಿ ದಾಖಲಿಸುವುದಾಗಿ ಸೋಮವಾರ ಹೇಳಿದ್ದರು.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್‍ರನ್ನು ಗುರಿಯಾಗಿಸುವುದು ಐತಿಹಾಸಿಕ ಅವಮಾನ ಎಂದು ಇಸ್ರೇಲ್ ಆಕ್ರೋಶ ವ್ಯಕ್ತಪಡಿಸಿದೆ. ಈ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಹಮಾಸ್ ಪ್ರತಿಕ್ರಿಯಿಸಿದೆ. ಐಸಿಸಿ ಅಧಿಕಾರಿ ಪ್ರಜಾಪ್ರಭುತ್ವ ಇಸ್ರೇಲ್ ಮತ್ತು ಸಾಮೂಹಿಕ ಕೊಲೆಗಾರ ಹಮಾಸ್ ನಡುವೆ ಹೋಲಿಕೆ ನಡೆಸಿರುವುದನ್ನು ಜಿಗುಪ್ಸೆಯಿಂದ ತಿರಸ್ಕರಿಸುವುದಾಗಿ ನೆತನ್ಯಾಹು ಹೇಳಿದ್ದಾರೆ.

ಒಂದು ವೇಳೆ ಐಸಿಸಿ ನ್ಯಾಯಾಧೀಶರು ವಾರಂಟ್ ಜಾರಿಗೆ ಸಮ್ಮತಿಸಿದರೆ ಐಸಿಸಿಯ ಎಲ್ಲಾ 124 ಸದಸ್ಯ ದೇಶಗಳೂ ಒಂದು ವೇಳೆ ನೆತನ್ಯಾಹು ಹಾಗೂ ಇತರರು ಆ ದೇಶಗಳಿಗೆ ಪ್ರಯಾಣಿಸಿದಾಗ ಅವರನ್ನು ಬಂಧಿಸಲು ತಾಂತ್ರಿಕವಾಗಿ ಬದ್ಧವಾಗಿರುತ್ತವೆ. ಆದರೆ ತನ್ನ ವಾರಂಟ್‍ಗಳನ್ನು ಜಾರಿಗೊಳಿಸಲು ಐಸಿಸಿ ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ.

ಐಸಿಸಿ ಕ್ರಮಕ್ಕೆ ಬೈಡನ್ ಖಂಡನೆ 

`ಇಸ್ರೇಲ್ ಮತ್ತು ಹಮಾಸ್ ಅನ್ನು ಹೋಲಿಸಿ ಐಸಿಸಿ ನೀಡಿರುವ ಅತಿರೇಕದ ಹೇಳಿಕೆಯನ್ನು ಅಮೆರಿಕ ಬಲವಾಗಿ ಖಂಡಿಸುವುದಾಗಿ' ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ಮುಖಂಡರ ಬಂಧನ ವಾರಂಟ್ ಕೋರಿ ಐಸಿಸಿಗೆ ಕೋರಿಕೆ ಸಲ್ಲಿಸುವುದಾಗಿ ಐಸಿಸಿ ಅಧಿಕಾರಿ ಸೋಮವಾರ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಬೈಡನ್ ` ಭಯೋತ್ಪಾದಕ ಸಂಘಟನೆ ಹಾಗೂ ಅಮೆರಿಕದ ಪ್ರಮುಖ ಮಿತ್ರರನ್ನು ಸಮಾನವಾಗಿ ಪರಿಗಣಿಸಿರುವುದು ಐಸಿಸಿಯ ಅತಿರೇಕದ ಕ್ರಮವಾಗಿ ಎಂದರು.

`ನಾಗರಿಕರ ಸುರಕ್ಷತೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲು ಇಸ್ರೇಲ್ ಬಯಸಿದೆ. ಅಲ್ಲಿ ನಡೆಯುತ್ತಿರುವುದು ನರಮೇಧವಲ್ಲ. ಒಂದನ್ನು ನಾನು ಸ್ಪಷ್ಟಪಡಿಸುತ್ತೇನೆ. ಈ ಪ್ರಾಸಿಕ್ಯೂಟರ್‍ನ ಹೇಳಿಕೆಯ ಅರ್ಥ ಏನೇ ಆಗಿರಲಿ, ಇಸ್ರೇಲ್ ಮತ್ತು ಹಮಾಸ್ ನಡುವೆ ಹೋಲಿಕೆ ಸಾಧ್ಯವಿಲ್ಲ ' ಎಂದವರು ಪ್ರತಿಪಾದಿಸಿದ್ದಾರೆ.

ತನ್ನ ಹೇಳಿಕೆಯ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಐಸಿಸಿ ಪ್ರಾಸಿಕ್ಯೂಟರ್ ಕರೀಂ ಖಾನ್ `ಕಾನೂನಿನ ಎದುರು ಎಲ್ಲರೂ ಸರಿಸಮಾನರು' ಎಂದಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News