ಷರತ್ತಿಗೆ ಒಪ್ಪಿದರೆ ಉಕ್ರೇನ್‍ನಲ್ಲಿ ತಕ್ಷಣ ಕದನವಿರಾಮ : ಪುಟಿನ್ ಘೋಷಣೆ

Update: 2024-06-14 16:48 GMT

 ವ್ಲಾದಿಮಿರ್ ಪುಟಿನ್ | PC : PTI
 

ಮಾಸ್ಕೋ : ನೇಟೊ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಯೋಜನೆಯಿಂದ ಉಕ್ರೇನ್ ಹಿಂದೆ ಸರಿದರೆ ಮತ್ತು ರಶ್ಯ ಆಕ್ರಮಿತ ಉಕ್ರೇನ್‍ನ 4 ಪ್ರಾಂತಗಳಿಂದ ತನ್ನ ಸೇನೆಯನ್ನು ವಾಪಾಸು ಕರೆಸಿಕೊಂಡರೆ ಉಕ್ರೇನ್‍ನಲ್ಲಿ ತಕ್ಷಣ ಕದನ ವಿರಾಮ ಜಾರಿಗೊಳ್ಳಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ವಾಗ್ದಾನ ನೀಡಿದ್ದಾರೆ.

ಶಾಂತಿ ಒಪ್ಪಂದಕ್ಕೆ ಉಕ್ರೇನ್ ಮೇಲೆ ಒತ್ತಡ ಹೇರುವ ಏಕೈಕ ಉದ್ದೇಶದಿಂದ ಎರಡು ವರ್ಷದ ಹಿಂದೆ ರಶ್ಯನ್ ಪಡೆಗಳು ಉಕ್ರೇನ್‍ನತ್ತ ಮುಂದುವರಿದವು. ಉಕ್ರೇನ್ ಯುದ್ಧದಲ್ಲಿ ಪರಮಾಣು ಅಸ್ತ್ರ ಬಳಕೆಯ ಅಗತ್ಯ ಕಾಣುವುದಿಲ್ಲ. ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಪಾಯದಂತಹ ಅಸಾಧಾರಣ ಸಂದರ್ಭದಲ್ಲಿ ಮಾತ್ರ ಪರಮಾಣು ಅಸ್ತ್ರ ಬಳಸುವ ಅಗತ್ಯ ಬೀಳುತ್ತದೆ. ಇಂತಹ ಪರಿಸ್ಥಿತಿ ಬಂದಿದೆ ಎಂದು ನನಗನಿಸುವುದಿಲ್ಲ' ಎಂದು ಪುಟಿನ್ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ಉಕ್ರೇನ್ ಅನ್ನು ಸ್ವಾಧೀನಪಡಿಸಿಕೊಂಡು ರಶ್ಯ-ಸ್ನೇಹಿ ಆಡಳಿತ ಸ್ಥಾಪಿಸಲು ಪುಟಿನ್ ಬಯಸಿದ್ದಾರೆ. ಆದರೆ ಉಕ್ರೇನ್‍ನ ಬಲವಾದ ಪ್ರತಿರೋಧದಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಪಾಶ್ಚಿಮಾತ್ಯ ದೇಶಗಳು ಪ್ರತಿಪಾದಿಸುತ್ತಿವೆ. ಪ್ರಸ್ತುತ ಉಕ್ರೇನ್‍ನ ಐದನೇ ಒಂದು ಭಾಗ ರಶ್ಯದ ನಿಯಂತ್ರಣದಲ್ಲಿದೆ. ತನ್ನ ಪ್ರದೇಶದಿಂದ ರಶ್ಯದ ಪಡೆಗಳು ಸಂಪೂರ್ಣ ವಾಪಸಾತಿ ಆಗದ ಹೊರತು ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಉಕ್ರೇನ್ ಆಗ್ರಹಿಸುತ್ತಿದೆ.

ಈ ಮಧ್ಯೆ, ಉಕ್ರೇನ್‍ನಲ್ಲಿ ಶಾಂತಿ ಸ್ಥಾಪನೆಯ ಬಗ್ಗೆ ಪ್ರಯತ್ನಿಸಲು ಸ್ವಿಝರ್ಲ್ಯಾಂಡ್‍ನಲ್ಲಿ 90ಕ್ಕೂ ಅಧಿಕ ದೇಶಗಳು ಸಭೆ ನಡೆಸುತ್ತಿದ್ದು ಇದಕ್ಕೆ ರಶ್ಯಾವನ್ನು ಆಹ್ವಾನಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪುಟಿನ್ `ಇದು ಸಮಯ ವ್ಯರ್ಥ ಅಷ್ಟೇ' ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News