ಪಾಕ್ ಚುನಾವಣೆಯ ಕುರಿತ ಯುರೋಪಿಯನ್ ಯೂನಿಯನ್‍ ವರದಿ ಬಹಿರಂಗಕ್ಕೆ ಇಮ್ರಾನ್‍ ಖಾನ್ ಆಗ್ರಹ

Update: 2024-03-25 17:45 GMT

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆಯ ಕುರಿತು ಯುರೋಪಿಯನ್ ಯೂನಿಯನ್‍ನ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಆಗ್ರಹಿಸಿದೆ.

ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಯುರೋಪಿಯನ್ ಯೂನಿಯನ್ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು ಮತ್ತು ಚುನಾವಣೆಯ ಬಗ್ಗೆ ತನ್ನ ವರದಿಯನ್ನು ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿರುವುದಾಗಿ ಹೇಳಿದೆ. ಇದು ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ವರದಿಯಾಗಿರುವುದರಿಂದ ಅದನ್ನು ತಕ್ಷಣ ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಬೇಕು ಎಂದು ಪಿಟಿಐ ವಕ್ತಾರ ರವೂಫ್ ಹಸನ್ ಇಸ್ಲಮಾಬಾದ್‍ನಲ್ಲಿ ಸೋಮವಾರ ಸುದ್ಧಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.

ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ರಾಜಕೀಯ ಪ್ರಮುಖರ ಸ್ಪರ್ಧೆಯನ್ನು ನಿರ್ಬಂಧಿಸಲಾಗಿತ್ತು. ಸಭೆ ಸೇರುವ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ, ಇಂಟರ್‍ನೆಟ್ ಬಳಕೆಗೆ ನಿರ್ಬಂಧ , ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪದ ಬಗ್ಗೆ ಹಲವು ದೂರುಗಳು ಕೇಳಿಬಂದಿವೆ ಎಂದು ಪಾಕ್ ಚುನಾವಣೆಯ ಬಗ್ಗೆ ಯುರೋಪಿಯನ್ ಯೂನಿಯನ್‍ನ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯ ವಕ್ತಾರ ಪೀಟರ್ ಸ್ಟ್ಯಾನೊ ಪ್ರತಿಕ್ರಿಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News