ಕೆಲ ಶ್ರೀಮಂತ ದೇಶಗಳಲ್ಲಿ ಮಕ್ಕಳ ಬಡತನ ದರ ಹೆಚ್ಚಳ ; ಯುನಿಸೆಫ್ ವರದಿ
ವಿಶ್ವಸಂಸ್ಥೆ: ವಿಶ್ವದ 40 ಅತೀ ಶ್ರೀಮಂತ ದೇಶಗಳಲ್ಲಿ 5ರಲ್ಲಿ ಒಂದು ಮಕ್ಕಳು ಅಥವಾ 69 ದಶಲಕ್ಷ ಮಕ್ಕಳು ಬಡತನದಲ್ಲಿ ವಾಸಿಸುತ್ತಿದ್ದಾರೆ. ಕೆಲವು ಶ್ರೀಮಂತ ದೇಶಗಳಲ್ಲಿ ಮಕ್ಕಳ ಬಡತನದ ಪ್ರಮಾಣ ತೀವ್ರ ಹೆಚ್ಚಳ ದಾಖಲಿಸಿದೆ ಎಂದು ಬುಧವಾರ ಬಿಡುಗಡೆಯಾದ ವರದಿಯಲ್ಲಿ ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ.
2012ರಿಂದ 2014 ಮತ್ತು 2019ರಿಂದ 2021ರ ಅವಧಿಯಲ್ಲಿ 40 ಅತೀ ಶ್ರೀಮಂತ ದೇಶಗಳಲ್ಲಿನ ಮಕ್ಕಳ ಬಡತನದ ದರದಲ್ಲಿ ಸುಮಾರು 8%ದಷ್ಟು ಇಳಿಕೆ ದಾಖಲಾಗಿದ್ದು ಈ ದೇಶಗಳಲ್ಲಿನ ಒಟ್ಟು 291 ದಶಲಕ್ಷ ಮಕ್ಕಳ ಜನಸಂಖ್ಯೆಯಲ್ಲಿ 6 ದಶಲಕ್ಷ ಮಕ್ಕಳು ಬಡತನದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಆದರೂ 2021ರ ಅಂತ್ಯದಲ್ಲಿ ಈ ದೇಶಗಳಲ್ಲಿ 69 ದಶಲಕ್ಷಕ್ಕೂ ಅಧಿಕ ಮಕ್ಕಳು ಬಡತನದಲ್ಲಿದ್ದಾರೆ ಎಂದು ಯುನಿಸೆಫ್(ವಿಶ್ವಸಂಸ್ಥೆಯ ಮಕ್ಕಳ ನಿಧಿ)ಯ ಸಂಶೋಧನಾ ವಿಭಾಗ `ಇನೊಸೆಂಟಿ' ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
`ಇದರರ್ಥ, ಹೆಚ್ಚಿನ ಮಕ್ಕಳು ಸಾಕಷ್ಟು ಪೌಷ್ಟಿಕ ಆಹಾರ, ಬಟ್ಟೆ, ಶಾಲಾ ಸಾಮಾಗ್ರಿಗಳು ಅಥವಾ ಸೂಕ್ತ ಆಶ್ರಯ ತಾಣವಿಲ್ಲದೆ ಬೆಳೆಯಬಹುದು. ಈ ರೀತಿಯ ಬವಣೆ, ಹೋರಾಟದ ಜೀವನ ಯುವಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಬಹುದು' ಎಂದು ಯುನಿಸೆಫ್ ಇನೊಸೆಂಟಿಯ ಬೊ ವಿಕ್ಟರ್ ನೈಲುಂಡ್ ಹೇಳಿದ್ದಾರೆ. ಯುನಿಸೆಫ್ ಅಂಕಿಅಂಶವು ಸಾಪೇಕ್ಷ ಬಡತನ(ರಾಷ್ಟ್ರೀಯ ಸರಾಸರಿ ಆದಾಯದ ಸುಮಾರು 6%ದಷ್ಟು)ವನ್ನು ಆಧರಿಸಿದೆ.
ಮಕ್ಕಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಮೀಕ್ಷೆಗೆ ಒಳಗಾದ ದೇಶಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಕರೆ ನೀಡಲಾಗಿದ್ದು ದೇಶದ ಸಂಪತ್ತು ಸ್ವಯಂಚಾಲಿತವಾಗಿ ಮಕ್ಕಳನ್ನು ಬಡತನದಿಂದ ಮೇಲೆತ್ತುವುದಿಲ್ಲ ಎಂದು ಒತ್ತಿಹೇಳಿದೆ. 2012ರಿಂದ ಕೆಲವು ಶ್ರೀಮಂತ ದೇಶಗಳಲ್ಲಿ ದೊಡ್ಡ ಹಿನ್ನಡೆ ಕಂಡುಬಂದಿದೆ. ಬ್ರಿಟನ್‍ನಲ್ಲಿ ಮಕ್ಕಳ ಬಡತನದ ದರದಲ್ಲಿ 19.6%ದಷ್ಟು, ಫ್ರಾನ್ಸ್‍ನಲ್ಲಿ 10.4%ದಷ್ಟು ಏರಿಕೆಯಾಗಿದೆ. ಅಮೆರಿಕದಲ್ಲಿ ಮಕ್ಕಳ ಬಡತನದ ಪ್ರಮಾಣದಲ್ಲಿ 6.7%ದಷ್ಟು ಇಳಿಕೆಯಾಗಿದ್ದರೂ 4ರಲ್ಲಿ ಒಂದು ಮಗು ಈಗಲೂ ಬಡತನದಲ್ಲಿ ಬದುಕುತ್ತಿದೆ.
ಮಕ್ಕಳ ಬಡತನ ಮತ್ತು ಆರ್ಥಿಕ ಅಸಮಾನತೆಯ ನಡುವಿನ ಸಂಬಂಧವನ್ನು ವರದಿ ಒತ್ತಿಹೇಳಿದ್ದು ಏಕ-ಪೋಷಕ ಕುಟುಂಬಗಳು ಮತ್ತು ಅಲ್ಪಸಂಖ್ಯಾತ ಹಿನ್ನೆಲೆಯ ಮಕ್ಕಳಿಗೆ ಬಡತನದ ಹೆಚ್ಚಿನ ಅಪಾಯವನ್ನು ತೋರಿಸುತ್ತದೆ. ಅಮೆರಿಕದಲ್ಲಿ 30%ದಷ್ಟು ಆಫ್ರಿಕನ್-ಅಮೆರಿಕನ್ ಮಕ್ಕಳು ಹಾಗೂ 29%ದಷ್ಟು ಸ್ಥಳೀಯ ಅಮೆರಿಕನ್ ಮಕ್ಕಳು ರಾಷ್ಟ್ರೀಯ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ಆದರೆ ಬಿಳಿಯ ಅಮೆರಿಕನ್ನರಲ್ಲಿ 10ರಲ್ಲಿ ಒಂದು ಮಗು ಮಾತ್ರ ಬಡತನ ರೇಖೆಯ ಕೆಳಗಿದೆ. ಯುರೋಪಿಯನ್ ಯೂನಿಯನ್‍ನಲ್ಲಿ, ಯುರೋಪಿಯನ್ ಯೂನಿಯನ್‍ಗೆ ಹೊರತಾದ ರಾಷ್ಟ್ರೀಯತೆಯ ಪೋಷಕರನ್ನು ಹೊಂದಿರುವ ಮಗು ಬಡತನದಲ್ಲಿ ಬದುಕುವ ಸಾಧ್ಯತೆ 2.4 ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.
ಪೋಲ್ಯಾಂಡ್, ಸ್ಲೊವೇನಿಯಾ ಸಾಧನೆ
ಫ್ರಾನ್ಸ್, ಐಸ್‍ಲ್ಯಾಂಡ್, ನಾರ್ವೆ, ಸ್ವಿಝರ್ಲ್ಯಾಂಡ್ ಮತ್ತು ಬ್ರಿಟನ್‍ನಲ್ಲಿ 2014ರಿಂದ 2021ರ ಅವಧಿಯಲ್ಲಿ ಮಕ್ಕಳ ಬಡತನದ ಪ್ರಮಾಣ ತೀವ್ರವಾಗಿ ಹೆಚ್ಚಿದ್ದರೆ, ಲಾತ್ವಿಯಾ, ಲಿಥುವೇನಿಯಾ, ಪೋಲ್ಯಾಂಡ್ ಮತ್ತು ಸ್ಲೊವೇನಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಪೋಲ್ಯಾಂಡ್ ಮತ್ತು ಸ್ಲೊವೇನಿಯಾ ಮಕ್ಕಳ ಬಡತನ ಸಮಸ್ಯೆ ನಿಭಾಯಿಸುವ ಪ್ರಯತ್ನಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ದೇಶಗಳು ಹಿಂದುಳಿದಿವೆ ಎಂದು ಯುನಿಸೆಫ್ ವರದಿ ಮಾಡಿದೆ.