ಫ್ರಾನ್ಸ್ ನಲ್ಲಿ ಅತಂತ್ರ ಸಂಸತ್: ಚುನಾವಣೋತ್ತರ ಸಮೀಕ್ಷೆ ಭವಿಷ್ಯ

Update: 2024-07-08 05:02 GMT

ಮೆರಿನ್ ಲೆ ಪೆನ್ | ಇಮ್ಯಾನ್ಯುವೆಲ್ ಮ್ಯಾಕ್ರೋನ್

ಪ್ಯಾರೀಸ್: ಫ್ರಾನ್ಸ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಅತಂತ್ರ ಸಂಸತ್ ನಿರ್ಮಾಣವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಬಲಪಂಥೀಯ ಪಕ್ಷಗಳನ್ನು ಹಿಂದಿಕ್ಕಿ ಎಡಪಕ್ಷಗಳು ಅನಿರೀಕ್ಷಿತ ಮುನ್ನಡೆ ಸಾಧಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಫಲಿತಾಂಶ ದೃಢಪಟ್ಟಲ್ಲಿ ಮರೀನ್ ಲೇ ಪೆನ್ ಅವರ ನ್ಯಾಷನಲ್ ರ್‍ಯಾಲಿ ಸರ್ಕಾರ ನಡೆಸುವ ಅವಕಾಶದಿಂದ ವಂಚಿತವಾಗಲಿದೆ. ಸಂಸತ್ತಿನಲ್ಲಿ ಇದುವರೆಗೆ ಜತೆಯಾಗಿ ಕಾರ್ಯ ನಿರ್ವಹಿಸದ ಮೂರು ದೊಡ್ಡ ಗುಂಪುಗಳು ಪ್ರಾಬಲ್ಯ ಸ್ಥಾಪಿಸಲಿವೆ.

ಕಟ್ಟಾ ಎಡಪಂಥೀಯ ಪಕ್ಷಗಳು, ಸೋಶಲಿಸ್ಟ್ ಹಾಗೂ ಗ್ರೀನ್ಸ್ ಒಕ್ಕೂಟವಾಗಿರುವ ನ್ಯೂ ಪಾಪ್ಯುಲರ್ ಫ್ರಂಟ್ 577 ಸದಸ್ಯಬಲದ ಸಂಸತ್ತಿನಲ್ಲಿ 172 ರಿಂಧ 215 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ಪೋಲ್ ಸ್ಟರ್ ಅಂದಾಜಿಸಿದೆ. ಸಾಮಾನ್ಯವಾಗಿ ಈ ಅಂದಾಜು ವಿಶ್ವಾಸಾರ್ಹ ಎನಿಸಿದೆ.

ಈ ಅಂದಾಜು ಪ್ರಕಟವಾಗುತ್ತಿದ್ದಂತೆ ಪ್ಯಾರೀಸ್ ನ ಎಡಪಕ್ಷಗಳ ಬೆಂಬಲಿಗರು ಆನಂದಭಾಷ್ಪದೊಂದಿಗೆ ಸಂತಸ ಹಂಚಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ಗ್ರೀನ್ಸ್ ಕಚೇರಿಯಲ್ಲಿ ಕಾರ್ಯಕರ್ತರು ಕೇಕೆ ಹಾಕಿ, ಪರಸ್ಪರ ಆಲಂಗಿಸಿಕೊಂಡು ಸಂಭ್ರಮಿಸಿದರು. ಇದಕ್ಕೆ ವಿರುದ್ಧವಾಗಿ ನ್ಯಾಷನಲ್ ರ್‍ಯಾಲಿ ಪಕ್ಷದ ಪಾಳಯದಲ್ಲಿ ಮೌನ ಆವರಿಸಿದ್ದು, ಕಣ್ಣೀರು ಕಟ್ಟೆಯೊಡೆಯಿತು.

ಈ ಫಲಿತಾಂಶದಿಂದ ಅಧ್ಯಕ್ಷ ಮ್ಯಾಕ್ರೋನ್ ಅವರಿಗೆ ಮುಖಭಂಗವಾಗಿದ್ದು, ಅವರು ಸೆಂಟ್ರಿಸ್ಟ್ ಮೈತ್ರಿಕೂಟ 150-180 ಸ್ಥಾನಗಳನ್ನು ಮಾತ್ರ ಗೆಲ್ಲುವ ನಿರೀಕ್ಷೆ ಇದೆ. ಇದರ ಜತೆಗೆ ಮರೀನ್ ಲೇ ಪೆನ್ ಅವರ ನ್ಯಾಷನಲ್ ರ್‍ಯಾಲಿಗೆ ಕೂಡಾ ಈ ಫಲಿತಾಂಶ ನಿರಾಸೆ ತಂದಿದ್ದು, ಈ ಪಕ್ಷ 115 ರಿಂದ 155 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಹೆಚ್ಚುತ್ತಿರುವ ಜೀವನವೆಚ್ಚ ಸಮಸ್ಯೆಯಿಂದ ಹಾಗೂ ಸಾರ್ವಜನಿಕ ಸೇವೆಗಳ ವೈಫಲ್ಯದಿಂದ ಜರ್ಜರಿತವಾಗಿರುವ ಜನಸಾಮಾನ್ಯರು ಮ್ಯಾಕ್ರೋನ್ ಹಾಗೂ ಅವರ ಪಕ್ಷವನ್ನು ಶಿಕ್ಷಿಸಿದ್ದಾರೆ. ವಲಸೆ ಹಾಗೂ ಭದ್ರತಾ ಸಮಸ್ಯೆಗಳು ಕೂಡಾ ಜನಸಾಮಾನ್ಯರ ಹತಾಶೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News