ಕೆನಡಾದಲ್ಲಿ ಕಾನ್ಸುಲರ್ ಶಿಬಿರ ಸ್ಥಗಿತಕ್ಕೆ ಭಾರತದ ನಿರ್ಧಾರ
ಒಟ್ಟಾವ : ಕೆನಡಾದ ಭದ್ರತಾ ಏಜೆನ್ಸಿಗಳಿಂದ ಕನಿಷ್ಠ ಭದ್ರತಾ ರಕ್ಷಣೆಯೂ ನಿರಾಕರಿಸಲಾಗಿರುವುದರಿಂದ ಯೋಜಿತ ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲು ಕೆನಡಾದಲ್ಲಿನ ಭಾರತೀಯ ಹೈಕಮಿಷನ್ ನಿರ್ಧರಿಸಿದೆ.
ನವೆಂಬರ್ 2 ಮತ್ತು 3ರಂದು ಸರ್ರೆ ಹಾಗೂ ಬ್ರಾಂಪ್ಟನ್ ನಲ್ಲಿ ನಡೆದಿದ್ದ ಕಾನ್ಸುಲರ್ ಶಿಬಿರದ ಮೇಲೆ ಖಾಲಿಸ್ತಾನ್ ಪರ ಗುಂಪು ದಾಳಿ ಮಾಡಿ ದಾಂಧಲೆ ನಡೆಸಿತ್ತು.
`ಸಮುದಾಯ ಶಿಬಿರ ಸಂಘಟಕರಿಗೆ ಕನಿಷ್ಠ ಭದ್ರತೆಯನ್ನೂ ಒದಗಿಸಲು ಸಾಧ್ಯವಿಲ್ಲ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿರುವ ಹಿನ್ನೆಲೆಯಲ್ಲಿ ಕೆಲವು ನಿಗದಿತ ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲು ಕಾನ್ಸುಲೇಟ್ ನಿರ್ಧರಿಸಿದೆ' ಎಂದು ಟೊರಂಟೊದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಶಿಬಿರಗಳಲ್ಲಿ ಭಾರತೀಯ ಕಾನ್ಸುಲರ್ ಸಿಬ್ಬಂದಿ ಪಾಲ್ಗೊಳ್ಳುವುದನ್ನು ಖಾಲಿಸ್ತಾನ್ ಪರ ಗುಂಪು ವಿರೋಧಿಸುತ್ತಿದೆ.
ಕೆನಡಿಯನ್ ಭಾರತೀಯರಿಗೆ ಅಗತ್ಯದ ಸೇವೆಗಳನ್ನು ಹಾಗೂ ಜೀವ ವಿಮಾ ಸರ್ಟಿಫಿಕೇಟ್‍ಗಳನ್ನು ಕಾನ್ಸುಲರ್ ಶಿಬಿರಗಳಲ್ಲಿ ಒದಗಿಸಲಾಗುತ್ತದೆ. ಸರ್ರೆಯಲ್ಲಿ ನವೆಂಬರ್ 3ರಂದು ಆಯೋಜಿಸಲಾಗಿದ್ದ ಶಿಬಿರದಲ್ಲಿ 750 ಜೀವ ವಿಮಾ ಸರ್ಟಿಫಿಕೇಟ್ ಒದಗಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.