ಫೆಲೆಸ್ತೀನ್ ನಲ್ಲಿನ ಇಸ್ರೇಲ್ ವಸಾಹತು ವಿರುದ್ಧ ವಿಶ್ವಸಂಸ್ಥೆಯ ಖಂಡನಾ ನಿರ್ಣಯವನ್ನು ಬೆಂಬಲಿಸಿದ ಭಾರತ
ನ್ಯೂಯಾರ್ಕ್: ಫೆಲೆಸ್ತೀನ್ ನಲ್ಲಿನ ಇಸ್ರೇಲ್ ವಸಾಹತು ವಿರುದ್ಧ ವಿಶ್ವಸಂಸ್ಥೆ ಅಂಗೀಕರಿಸಿದ ಖಂಡನಾ ನಿರ್ಣಯವನ್ನು ಬೆಂಬಲಿಸಿ ಭಾರತ ಮತದಾನ ಮಾಡಿದೆ. ಪೂರ್ವ ಜೆರುಸಲೇಂ ಒಳಗೊಂಡಂತೆ ಫೆಲೆಸ್ತೀನ್ ಪ್ರಾಂತ್ಯ ಹಾಗೂ ಸಿರಿಯನ್ ಗೋಲನ್ ನಲ್ಲಿ ಅತಿಕ್ರಮಣ ನಡೆಸಿ ನಡೆಸಲಾಗುತ್ತಿರುವ ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯವನ್ನು ಗುರುವಾರ ಅಂಗೀಕರಿಸಲಾಗಿದೆ. ಈ ನಿರ್ಣಯವನ್ನು ವಿರೋಧಿಸಿದ ಏಳು ದೇಶಗಳ ಪೈಕಿ ಅಮೆರಿಕ ಮತ್ತು ಕೆನಡಾ ಸೇರಿವೆ. ಹದಿನೆಂಟು ದೇಶಗಳು ಮತದಾನದಿಂದ ದೂರ ಉಳಿದವು ಎಂದು ndtv.com ವರದಿ ಮಾಡಿದೆ.
ಈ ನಡೆಯು ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಶೀಘ್ರ, ಸುಸ್ಥಿರ ಮಾನವೀಯ ಮಾರ್ಗವನ್ನು ನಿರ್ಮಿಸಬೇಕು ಎಂದು ಆಗ್ರಹಿಸುವ ವಿಶ್ವ ಸಂಸ್ಥೆಯ ನಿರ್ಣಯದಿಂದ ಭಾರತ ದೂರ ಉಳಿದ ಕೆಲ ವಾರಗಳ ನಂತರ ಬಂದಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ನಂತರ ಇಸ್ರೇಲ್ ಗಾಝಾ ಮೇಲೆ ತೀವ್ರ ಬಾಂಬ್ ದಾಳಿ ಮುಂದುವರಿಸಿದೆ. ಗಾಝಾದಲ್ಲಿ ಈವರೆಗೆ 11,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇದಕ್ಕೂ ಮುನ್ನ ಹಮಾಸ್ ದಾಳಿಯಲ್ಲಿ 1,200 ಮಂದಿ ಮೃತಪಟ್ಟು, ಸುಮಾರು 200 ಮಂದಿಯನ್ನು ಒತ್ತೆಯಾಳುಗಳನ್ನಾಗಿಸಿಕೊಳ್ಳಲಾಗಿತ್ತು.