2024ರಲ್ಲಿ ಭಾರತದಿಂದ ಅಮೆರಿಕಾವರೆಗೆ ಚುನಾವಣಾ ಪರ್ವ: ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಸಾಧ್ಯತೆ

Update: 2024-01-16 13:37 GMT

File Photo

ಲಂಡನ್: ಇಡೀ ವಿಶ್ವದ ಶೇ. 60ರಷ್ಟು ಆರ್ಥಿಕತೆಯನ್ನು ಹೊಂದಿರುವ ಹಾಗೂ ವಿಶ್ವದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ.

ಶನಿವಾರ ತೈವಾನ್ ಮತದಾರರು ಆಡಳಿತಾರೂಢ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಲಾಯಿ ಚಿಂಗ್-ತೆಯನ್ನು ಮರು ಚುನಾಯಿಸುವ ಮೂಲಕ, ಅವರನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂಬ ಚೀನಾದ ಒತ್ತಡವನ್ನು ತಳ್ಳಿ ಹಾಕಿದ್ದಾರೆ. ಇದರ ಬೆನ್ನಿಗೇ, ಅಮೆರಿಕಾದ ಇಯೋವಾದಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳ ಪ್ರಥಮ ಸುತ್ತಿನ ನಾಮ ನಿರ್ದೇಶನ ಸ್ಪರ್ಧೆ ನಡೆಯಲಿದೆ.

ಮಾರುಕಟ್ಟೆಯ ಮೇಲೆ ಈ ಪ್ರಮುಖ ಚುನಾವಣೆಗಳು ಹೇಗೆ ಪರಿಣಾಮವನ್ನುಂಟು ಮಾಡುತ್ತವೆ ಎಂಬ ದೃಷ್ಟಿಕೋನದಲ್ಲಿ ಬಹುತೇಕ ಕಾಲಾನುಕ್ರಮದ ಆಧಾರದಲ್ಲಿ ಅವುಗಳತ್ತ ಈ ಕೆಳಗಿನ ಪಕ್ಷಿ ನೋಟ:

ಯೂರೋಪ್

ಚುನಾವಣಾ ದಿನಾಂಕಗಳು: ಮಾರ್ಚ್ 10 (ಪೋರ್ಚುಗಲ್), ಜೂನ್ 9 (ಬೆಲ್ಜಿಯಂ), ಜೂನ್ 6-9 (ಯೂರೋಪ್ ಸಂಸತ್ತು), ಮಳೆಗಾಲ/ಚಳಿಗಾಲ (ಕ್ರೊವೇಶಿಯಾ), ನವೆಂಬರ್ (ರೊಮಾನಿಯಾ ಹಾಗೂ ಆಸ್ಟ್ರೇಲಿಯಾ ದೃಢಪಡಿಸಬೇಕಿದೆ).

ನವೆಂಬರ್ ತಿಂಗಳು ನಡೆದಿದ್ದ ನೆದರ್ ಲ್ಯಾಂಡ್ ಚುನಾವಣೆಯಲ್ಲಿ ಗ್ರೀಟ್ ವೈಲ್ಡರ್ ನೇತೃತ್ವದ ಫ್ರೀಡಮ್ ಪಕ್ಷವು ಆಘಾತಕಾರಿ ಗೆಲುವು ಸಾಧಿಸಿರುವುದರಿಂದ ಯೂರೋಪ್ ಒಕ್ಕೂಟದ ಉಗ್ರ ಬಲಪಂಥೀಯ ಪಕ್ಷಗಳಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಇದರಿಂದಾಗಿ ಆಸ್ಟ್ರಿಯಾ ಚುನಾವಣೆಗೆ ಮಹತ್ವ ಪ್ರಾಪ್ತವಾಗಿದೆ. ಪೋರ್ಚುಗಲ್ ನಲ್ಲಿ ಎಡ ಪಕ್ಷಗಳು ಮುನ್ನಡೆ ಗಳಿಸಿದರೂ, ಚೆಗಾ ಪಕ್ಷದ ಮತ ಗಳಿಕೆಯ ಪ್ರಮಾಣ ದುಪ್ಪಟ್ಟಾಗುವ ಸಾಧ್ಯತೆ ಇದೆ.

ವಲಸೆ ನೀತಿಯನ್ನು ಕಠಿಣಗೊಳಿಸುವ ಹಾಗೂ ಹಸಿರು ಸುಧಾರಣೆಯನ್ನು ಮೃದುಗೊಳಿಸುವ ಶಪಥ ಮಾಡಿರುವ ಉಗ್ರ ಬಲಪಂಥೀಯ ಪಕ್ಷಗಳು ಯೂರೊಪ್ ಒಕ್ಕೂಟದ ಸಂಸತ್ತಿನಲ್ಲಿ ಲಾಭ ಮಾಡಿಕೊಳ್ಳುವತ್ತ ಕಣ್ಣು ನೆಟ್ಟಿರುವುದು ಮಹತ್ವದ್ದಾಗಿದೆ.

ಮಾರುಕಟ್ಟೆ ಅಪಾಯಗಳು

ಯೂರೋಪ್ ಐಕ್ಯತೆಯ ಬದ್ಧತೆಯನ್ನು ದುರ್ಬಲಗೊಳಿಸುವಂತೆ ಯುರೋಪ್ ಬಲಪಂಥೀಯ ಪಕ್ಷಗಳಿಗೇನಾದರೂ ಲಾಭವಾದರೆ, 2023ನೇ ಸಾಲಿನಲ್ಲಿ ಯೂರೋಪ್ ಮಟ್ಟದಲ್ಲಿ ಶೇರುಗಳು ಹಾಗೂ ಬಾಂಡ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಇಟಲಿಯ ಶೇರು ಮಾರುಕಟ್ಟೆ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಏರುಮುಖದಲ್ಲಿದ್ದ ಯೂರೋಪ್ ಒಕ್ಕೂಟದ ಸಾಲವು ಕೋವಿಡ್ ಸಾಂಕ್ರಾಮಿಕೋತ್ತರ ಕಾಲಘಟ್ಟದ ಚೇತರಿಕೆಗೆ ಮರಳಿರುವುದರಿಂದ, ಇಟಲಿಯ ಸಾಲದಿಂದ ಉದ್ಭವವಾಗಿದ್ದ ಅಪಾಯವನ್ನು ತಗ್ಗಿಸುವಲ್ಲಿ ನೆರವು ನೀಡಿತ್ತು.

ಯೂರೋಪ್ ಒಕ್ಕೂಟವು ಶಾಸನ ರಚನೆ ಹಾಗೂ ಮೈತ್ರಿಕೂಟದ ಕಾರ್ಯಕಾರಿಣಿಯ ಮುಂದಿನ ಮುಖ್ಯಸ್ಥರ ಆಯ್ಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದು, ಉಕ್ರೇನ್ ಗೆ ಮತ್ತಷ್ಟು ನೆರವು ಹಾಗೂ ಹವಾಮಾನ ನೀತಿಯ ಬಗ್ಗೆ ಗಮನ ಹರಿಸಲಿದೆ.

ರಶ್ಯಾ

ಚುನಾವಣಾ ದಿನಾಂಕ: ಮಾರ್ಚ್ 17

1999ರಲ್ಲಿ ಅಧ್ಯಕ್ಷ ಹುದ್ದೆಯನ್ನು ಬೋರಿಸ್ ಯೆಲ್ ಸ್ಟಿನ್ ಅವರಿಗೆ ಹಸ್ತಾಂತರಿಸಿದ್ದ ವ್ಲಾದಿಮಿರ್ ಪುಟಿನ್ ಮತ್ತೆ ಆರು ವರ್ಷಗಳ ಅಧಿಕಾರಕ್ಕೆ ಮರಳುವುದು ನಿಶ್ಚಿತವಾಗಿದೆ. ರಷ್ಯಾದಲ್ಲಿ ಶೇ. 80ಕ್ಕೂ ಹೆಚ್ಚು ಮತದಾರರ ಬೆಂಬಲವನ್ನು ಪುಟಿನ್ ಪಡೆದಿದ್ದಾರೆ ಎಂದು ಮತದಾನಗಳು ಸೂಚಿಸುತ್ತಿವೆ. ಆದರೆ, ಈ ಚುನಾವಣೆಯು ವೇದಿಕೆಯಿಂದ ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿರುವ ಪ್ರಜಾಪ್ರಭುತ್ವದ ಅಣಕು ಪ್ರದರ್ಶನ ಎಂದು ಆರೋಪಿಸಿವೆ.

ಪ್ರಮುಖ ಮಾರುಕಟ್ಟೆ ಅಪಾಯ

ಚುನಾವಣಾ ಅಭಿಯಾನದಲ್ಲಿ ಉಕ್ರೇನ್ ಯುದ್ಧದ ಕುರಿತು ಪುಟಿನ್ ತಮ್ಮ ಮತ್ತಷ್ಟು ಚಿಂತನೆಗಳಲ್ಲಿ ಹಂಚಿಕೊಳ್ಳುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಮೂಗು ತೂರಿಸುವ ಯಾವುದೇ ಪ್ರಯತ್ನಗಳನ್ನು ಆಕ್ರಮಣ ಎಂದು ಪರಿಗಣಿಸಲಾಗುವುದು ಎಂದು ಪುಟಿನ್ ಪಾಶ‍್ಚಿಮಾತ್ಯ ದೇಶಗಳಿಗೆ ಎಚ್ಚರಿಸಿದ್ದಾರೆ.

ಅಮೆರಿಕಾ ಹಾಗೂ ಜಪಾನ್ ನಂಥ ಪಾಶ‍್ಚಿಮಾತ್ಯ ದೇಶಗಳು ರಷ್ಯಾದ ಕೇಂದ್ರ ಬ್ಯಾಂಕ್ ಸಾಗರೋತ್ತರ ದೇಶಗಳಲ್ಲಿ ನಗದು ಹಾಗೂ ಸರ್ಕಾರಿ ಬಾಂಡ್ ಗಳ ರೂಪದಲ್ಲಿ ಇರಿಸಿರುವ ಮುಟ್ಟುಗೋಲು ಹಾಕಿಕೊಂಡಿರುವ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಚಿಂತನೆ ನಡೆಸಿವೆ. ಒಂದು ವೇಳೆ ಹಾಗೇನಾದರೂ ತಾನು ಪ್ರತೀಕಾರ ತೀರಿಸಿಕೊಳ್ಳುವುದಾಗಿ ರಶ್ಯಾ ಬೆದರಿಕೆ ಒಡ್ಡಿದೆ.

ತೀವ್ರ ಸ್ವರೂಪದ ವಿತ್ತೀಯ ಕೊರತೆಯಿಂದಾಗಿ ಬಡ್ಡಿ ದರಗಳು ಗರಿಷ್ಠ ಪ್ರಮಾಣದಲ್ಲಿರುವುದರಿಂದ ಹಣದುಬ್ಬರವು ತೀವ್ರ ಸ್ವರೂಪಕ್ಕೆ ತಲುಪಿದ್ದರೂ ಉಕ್ರೇನ್ ಯುದ್ಧಕ್ಕಾಗಿ ರಕ್ಷಣಾ ವಲಯದ ಮೇಲೆ ರಶ್ಯಾ ಮಾಡುತ್ತಿರುವ ವೆಚ್ಚದಿಂದಾಗಿ ರಶ್ಯಾದ ಆರ್ಥಿಕತೆಯು ಏರುಮುಖದಲ್ಲಿದೆ.

ಟರ್ಕಿ

ದಿನಾಂಕ: ಮಾರ್ಚ್ 31 (ಸ್ಥಳೀಯ ಚುನಾವಣೆ)

ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಮೇ ತಿಂಗಳಲ್ಲಿ ಮರು ಚುನಾಯಿತಗೊಂಡಿರುವ ಬೆನ್ನಿಗೇ ಟರ್ಕಿಯು ಸಾಂಪ್ರದಾಯಿಕ ಆರ್ಥಿಕತೆಗೆ ಮರಳಿರುವುದರಿಂದ ಅಂತಾರಾಷ್ಟ್ರೀಯ ಹೂಡಿಕೆದಾರರಲ್ಲಿ ಆಸಕ್ತಿ ಕುದುರಿದೆ. ಅಂತಾರಾಷ್ಟ್ರೀಯ ಬಾಂಡ್ ವಿತರಣೆಗೆ 2024 ದಾಖಲೆಯ ವರ್ಷವಾಗಬಹುದು ಎಂದು ಜೆಪಿಮೋರ್ಗನ್ ಭವಿಷ್ಯ ನುಡಿದಿದೆ.

ಪ್ರಮುಖ ಮಾರುಕಟ್ಟೆ ಅಪಾಯ

ದುರ್ಬಲ ಆರ್ಥಿಕತೆ ಹಾಗೂ ಶೇ. 60ಕ್ಕೆ ತಲುಪಿದ್ದ ಹಣದುಬ್ಬರದಿಂದ ಕಳವಳಗೊಂಡಿರುವ ಎರ್ಡೋಗನ್, ಮತ್ತೆ ಸಾಂಪ್ರದಾಯಿಕ ಆರ್ಥಿಕತೆಗೆ ಮರಳಿದ್ದರು. ಆದರೆ, ಅಪಾರವಾಗಿ ಗೌರವಿಸಲ್ಪಡುವ ಹಣಕಾಸು ಸಚಿವ ಮೆಹ್ಮೆತ್ ಸಿಮ್ಸೆಕ್ ಆಗಲಿ ಅಥವಾ ವಾಲ್ ಸ್ಟ್ರೀಟ್ ಸೆಂಟ್ರಲ್ ಬ್ಯಾಂಕ್ ನಿಂದ ಆಯ್ಕೆ ಮಾಡಿಕೊಳ್ಳಲಾಗಿರುವ ಗವರ್ನರ್ ಹಫೀಝ್ ಗಯೆ ಎರ್ಕನ್ ಆಗಲಿ ಒತ್ತಡಕ್ಕೆ ಸುಲಭವಾಗಿ ಬಗ್ಗುವ ನಿರೀಕ್ಷೆ ಇಲ್ಲ. ತಮ್ಮ ಆಯ್ಕೆಯನ್ನೇ ತಳ್ಳಿ ಹಾಕುವ ಇತಿಹಾಸ ಎರ್ಡೋಗನ್ ಅವರಿಗಿದ್ದು, ಹಲವಾರು ವರ್ಷಗಳಲ್ಲಿ ನಾಲ್ಕು ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ.

ಭಾರತ

ಚುನಾವಣಾ ದಿನಾಂಕ: ಎಪ್ರಿಲ್-ಮೇ( ದಿನಾಂಕ ದೃಢಪಡಬೇಕಿದೆ)

ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಮೂರನೆಯ ಬಾರಿಗೆ ಗೆಲುವು ಸಾಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಚೀನಾದಿಂದ ಬಂಡವಾಳವನ್ನು ಹಿಂಪಡೆಯುತ್ತಿರುವ ಹೂಡಿಕೆದಾರರು ಭಾರತದತ್ತ ಮುಖ ಮಾಡಿದ್ದಾರೆ.

ಪ್ರಮುಖ ಮಾರುಕಟ್ಟೆ ಅಪಾಯ

ನಿರಂತರವಾಗಿ ಮುಂದುವರಿದಿರುವ ಹಣದುಬ್ಬರದಿಂದ ಬಿಜೆಪಿಗೆ ಹಾನಿಯಾಗುವ ಸಂಭವವಿದೆ. ಒಂದು ವೇಳೆ ಬಿಜೆಪಿಯೇನಾದರೂ ನಿಚ್ಚಳ ಬಹುಮತ ಪಡೆಯುವುದು ಸಾಧ‍್ಯವಾಗದಿದ್ದರೆ, ಪ್ರಧಾನಿ ಮೋದಿ ಮೈತ್ರಿ ಸರ್ಕಾರವನ್ನು ರಚಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಅಗತ್ಯ ವಸ್ತುಗಳ ಪ್ರಮುಖ ರಫ್ತು ದೇಶವಾದ ಭಾರತವು ಅಕ್ಕಿ, ಗೋಧಿ ಹಾಗೂ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ವಿಧಿಸುವ ಮೂಲಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಜನಪ್ರಿಯ ಆರ್ಥಿಕ ಕಾರ್ಯಕ್ರಮಗಳತ್ತ ಮರಳುತ್ತಿರುವ ಕಾರಣಕ್ಕೆ ಭಾರತದ ವಿತ್ತೀಯ ಕೊರತೆಯು ಮತ್ತಷ್ಟು ಬಿಗಡಲಾಯಿಸುವ ಸಾಧ್ಯತೆ ಇದ್ದು, ಅದಕ್ಕಾಗಿ ಸ್ಥಳೀಯ ಮಾರುಕಟ್ಟೆಯಿಂದ ದೊಡ್ಡ ಮೊತ್ತದ ಸಾಲ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೆಕ್ಸಿಕೊ

ಚುನಾವಣಾ ದಿನಾಂಕ: ಜೂನ್ 2

ಅಧ‍್ಯಕ್ಷೀಯ ಚುನಾವಣೆಯು ಕಾಂಗ್ರೆಸ್ ನ ಸಂಪೂರ್ಣ ಪುನಾರಚನೆ ಹಾಗೂ ಒಂಬತ್ತು ರಾಜ್ಯಗಳ ಚುನಾವಣೆಗಳನ್ನು ಒಳಗೊಂಡಿದೆ. ಮತದಾನಗಳು ಆಡಳಿತಾರೂಢ ನ್ಯಾಶನಲ್ ರಿಜನರೇಶನ್ ಮೂವ್ ಮೆಂಟ್ (ಮೊರೇನಾ) ಪಕ್ಷ ಹಾಗೂ ಅದರ ಅಧ್ಯಕ್ಷೀಯ ಅಭ್ಯರ್ಥಿಯಾದ ಮೆಕ್ಸಿಕೊ ನಗರದ ಮಾಜಿ ಮೇಯರ್ ಕ್ಲೌಡಿಯಾ ಶೈನ್ ಬೌಮ್ ಅವರಿಗೆ ವ್ಯಾಪಕವಾಗಿ ಎರಡು ಅಂಕಿಯ ಮುನ್ನಡೆಯನ್ನು ನೀಡಿವೆ. ಜನಪ್ರಿಯ ಮೊರೇನಾ ಪಕ್ಷವು ಸಾಂವಿಧಾನಿಕ ಬದಲಾವಣೆ ಮಾಡುವುದನ್ನು ಸಾಕಷ್ಟು ಸಮತೋಲಿತ ಕಾಂಗ್ರೆಸ್ ತಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಹಾಲಿ ಅಧ್ಯಕ್ಷ ಆ‍್ಯಂಡ್ರೆಸ್ ಮ್ಯಾನ್ಯುಯೆಲ್ ಲೋಪೆಝ್ ಒಬ್ರಡಾರ್ ಅವರ ವೆಚ್ಚ ಮಾಡುವ ಅಭಿಯಾನಕ್ಕೆ ಭಾರಿ ಯಶಸ್ಸು ದೊರೆತಿರುವುದರಿಂದ ಶೈನ್ ಬೌಮ್ ಕೂಡಾ ಅವರನ್ನೇ ಅನುಸರಿಸುವ ನಿರೀಕ್ಷೆ ಇದೆ.

ಪ್ರಮುಖ ಮಾರುಕಟ್ಟೆ ಅಪಾಯ

ಭಾರಿ ಪ್ರಮಾಣದ ವೆಚ್ಚ ಮಾಡುವುದರಿಂದ ಮೆಕ್ಸಿಕೊ ಹಣದ ಮೌಲ್ಯವು ಕುಸಿಯಲಿದ್ದು, ಸರ್ಕಾರಿ ಬಾಂಡ್ ಗಳಿಗೆ ಹಾನಿಯಾಗಲಿದೆ.

ದಕ್ಷಿಣ ಆಫ್ರಿಕಾ

ಚುನಾವಣಾ ದಿನಾಂಕ: ಮೇ-ಆಗಸ್ಟ್ 2024, ಇನ್ನೂ ದೃಢಪಡಬೇಕಿದೆ

1994ರಲ್ಲಿ ನೆಲ್ಸನ್ ಮಂಡೇಲಾ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗಿನಿಂದ ಇದೇ ಪ್ರಥಮ ಬಾರಿಗೆ ಆ ಪಕ್ಷವು ಸಂಸತ್ತಿನಲ್ಲಿ ಬಹುಮತ ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದೆ. ಆರ್ಥಿಕ ಸಂಕಷ್ಟ, ವಿದ್ಯುತ್ ಕಡಿತ, ಕಠಿಣ ಪರಿಸ್ಥಿತಿ ಹಾಗೂ ಭ್ರಷ್ಟಾಚಾರದ ಆರೋಪಗಳು ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಮತದಾರರನ್ನು ವಿಮುಖಗೊಳಿಸಿವೆ. ಹೀಗಾಗಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಡೆಮಾಕ್ರಟಿಕ್ ಅಲಯನ್ಸ್ ಅಥವಾ ಮಾರ್ಕ್ಸಿಸ್ಟ್ ಎಕನಾಮಿಕ್ ಫ್ರೀಡಂನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿದೆ.

ಪ್ರಮುಖ ಮಾರುಕಟ್ಟೆ ಅಪಾಯ

ಅವಧಿಪೂರ್ವ ಚುನಾವಣೆ, ಕಠಿಣ ಪರಿಸ್ಥಿತಿಯನ್ನು ಸರ್ಕಾರವು ಸಹನೀಯಗೊಳಿಸುವ ಸಾಧ‍್ಯತೆ ಇರುವುದರಿಂದ ಸಾಲದ ಪ್ರಮಾಣದಲ್ಲಿ ಏರಿಕೆ. ಒಂದು ವೇಳೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಎಡ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ, ಸಾಮಾಜಿಕ ವೆಚ್ಚಗಳು ಏರಿಕೆಯಾಗುವ ಸಾಧ‍್ಯತೆ. ದುರ್ಬಲ ಕರೆನ್ಸಿ ಬಗೆಗಿನ ಕಳವಳ ಹಾಗೂ ಸಾರ್ವಜನಿಕ ವೆಚ್ಚದಿಂದ ಬಡ್ಡಿ ದರ ಕಡಿತ ನಿಧಾನವಾಗುವ ಸಾಧ್ಯತೆ.

ಅಮೆರಿಕಾ

ದಿನಾಂಕ: ನವೆಂಬರ್ 5

ಮುಂಬರುವ ಪ್ರಾಥಮಿಕ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ಮತ್ತೆ ಹಾಲಿ ಅಧ್ಯಕ್ಷ ಜೋ ಬೈಡನ್ ರೊಂದಿಗೆ ನಿಕಟ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇದು 2020ರ ಚುನಾವಣೆಯ ಪುನರಾವರ್ತನೆಯಾಗುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಟ್ರಂಪ್ ಬೆಂಬಲಿಗರ ಗುಂಪು ಜೋ ಬೈಡನ್ ಗೆಲುವಿನ ಪ್ರಮಾಣೀಕರಣವನ್ನು ತಡೆಯಲು ಕಾಂಗ್ರೆಸ್ ಮೇಲೆ ದಾಳಿ ನಡೆಸಿತ್ತು.

ನಾಲ್ಕು ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಟ್ರಂಪ್ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಇವುಗಳೊಂದಿಗೆ ಹಲವಾರು ಕಾನೂನಾತ್ಮಕ ಪ್ರಕರಣಗಳೂ ಅವರ ವಿರುದ್ಧ ಇವೆ. ಹೀಗಿದ್ದೂ, 2020ರ ಚುನಾವಣೆಯನ್ನು ಅಪಹರಿಸಲಾಯಿತು ಎಂದು ಅವರು ತಪ್ಪಾಗಿ ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಟ್ರಂಪ್ ಅವರನ್ನು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕರೆದಿರುವ ಬೈಡನ್, ಒಂದು ವೇಳೆ ಟ್ರಂಪ್ ಏನಾದರೂ ಮರಳಿ ಅಧಿಕಾರಕ್ಕೆ ಬಂದರೆ, ತಮ್ಮ ವೈರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಮಾರುಕಟ್ಟೆ ಅಪಾಯ

ನಾಲ್ಕು ವರ್ಷಗಳ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ನಡೆದಿದ್ದ ಹಿಂಸಾಚಾರದಿಂದ ಮಾರುಕಟ್ಟೆ ಕುಸಿತ ಕಂಡಿತ್ತು. ಆದರೆ, ಈ ಬಾರಿಯೂ ಉಭಯ ಪಕ್ಷಗಳ ನಡುವೆ ಬಿಸಿ ವಾಗ್ವಾದಗಳು ನಡೆಯುತ್ತಿರುವುದರಿಂದ ಬೈಡನ್-ಟ್ರಂಪ್ ನಡುವಿನ ಮರು ಸ್ಪರ್ಧೆಯು ಸಾಮಾಜಿಕ ಕ್ಷೋಭೆಯನ್ನು ಸೃಷ್ಟಿಸಬಹುದು ಎಂದು ಹೂಡಿಕೆದಾರರು ಕಳವಳಗೊಂಡಿದ್ದಾರೆ.

ಈ ಎಲ್ಲ ದೇಶಗಳೊಂದಿಗೆ ಬ್ರಿಟನ್ ಹಾಗೂ ವೆನಿಝುವೆಲಾದಲ್ಲೂ ಈ ವರ್ಷ ಚುನಾವಣೆ ನಡೆಯಲಿದ್ದು, ಅಲ್ಲಿನ ಚುನಾವಣಾ ಫಲಿತಾಂಶವು ಜಾಗತಿಕ ಆರ್ಥಿಕತೆಯ ವೇಗವನ್ನು ನಿರ್ಧರಿಸಲಿದೆ.

ಸೌಜನ್ಯ : ndtv.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News