ಭಾರತ - ಅಮೆರಿಕ ಯೋಜನೆ, ದ್ವಿಪಕ್ಷೀಯ ಬೆಂಬಲ ಹೆಚ್ಚಿಸಲು ಕ್ರಮ

Update: 2024-09-22 14:42 GMT

PC : PTI

ವಾಷಿಂಗ್ಟನ್ : ಎರಡು ರಾಷ್ಟ್ರಗಳ ನಡುವೆ ಅಸ್ತಿತ್ವದಲ್ಲಿರುವ ಶುದ್ಧ ಇಂಧನ ಸಹಕಾರವನ್ನು ನಿರ್ಮಿಸಲು ಪೂರಕ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ದ್ವಿಪಕ್ಷೀಯ ತಾಂತ್ರಿಕ, ಹಣಕಾಸು ಮತ್ತು ಕಾರ್ಯನೀತಿ ಬೆಂಬಲವನ್ನು ಹೆಚ್ಚಿಸಲು ಅಮೆರಿಕ ಮತ್ತು ಭಾರತ ಯೋಜನೆ ರೂಪಿಸಿದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.

ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಡೆಲವೇರ್‍ನ ಗ್ರೀನ್‍ವಿಲ್ಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜತೆ ನಡೆಸಿದ ಸಭೆಯ ಬಳಿಕ ಈ ಘೋಷಣೆ ಹೊರಬಿದ್ದಿದೆ. ಶುದ್ಧ ಇಂಧನದ ಮೇಲೆ ಕೇಂದ್ರೀಕೃತವಾದ ಅತ್ಯಾಧುನಿಕ ತಾಂತ್ರಿಕ-ಕೈಗಾರಿಕಾ ನೆಲೆಯನ್ನು ಸ್ಥಾಪಿಸಲು ಪಾಲುದಾರಿಕೆಯನ್ನು ಪ್ರಾರಂಭಿಸಲು, ಭಾರತದ ದೇಶೀಯ ಶುದ್ಧ ಇಂಧನ ಪೂರೈಕೆ ಸರಪಳಿ ನಿರ್ಮಾಣದ ವೇಗವರ್ಧನೆ ಸೇರಿದಂತೆ, ಯೋಜನೆಗಳಿಗೆ ಐಬಿಆರ್‍ಡಿ ಬ್ಯಾಂಕ್ ಮೂಲಕ 1 ಶತಕೋಟಿ ಡಾಲರ್ ಬಹುಪಕ್ಷೀಯ ಹಣಕಾಸು ನೆರವಿಗಾಗಿ ಭಾರತ-ಅಮೆರಿಕ ಕಾರ್ಯ ರೂಪಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಈ ಪಾಲುದಾರಿಕೆಯು ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಘಟಕಗಳಿಗೆ ಪೂರಕವಾದ ಅಮೆರಿಕ ಮತ್ತು ಭಾರತೀಯ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಲು ಮತ್ತು ಆಫ್ರಿಕಾವನ್ನು ಕೇಂದ್ರೀಕರಿಸಿ ಮೂರನೇ ರಾಷ್ಟ್ರಗಳಲ್ಲಿ ವರ್ಧಿತ ಸಹಕಾರಕ್ಕಾಗಿ ಅಡಿಪಾಯವನ್ನು ಹಾಕುತ್ತದೆ. ಅಮೆರಿಕ-ಭಾರತ ಪಾಲುದಾರಿಕೆಯು ಜಗತ್ತಿಗೆ ಬಲವಾದ ಉದಾಹರಣೆಯಾಗಿದೆ ಮತ್ತು 21ನೇ ಶತಮಾನದಲ್ಲಿ ಶುದ್ಧ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಲು ಉಭಯ ದೇಶಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

>>> ಕೋಲ್ಕತಾದಲ್ಲಿ ಸೆಮಿಕಂಡಕ್ಟರ್ ಘಟಕ

ಸಭೆಯಲ್ಲಿ ಬೈಡನ್ ಮತ್ತು ಮೋದಿ ಕೋಲ್ಕತಾದಲ್ಲಿ `ಗ್ಲೋಬಲ್ ಫೌಂಡ್ರೀಸ್ ಕೋಲ್ಕತಾ ಪವರ್ ಸೆಂಟರ್' ಸೇರಿದಂತೆ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗೆ ಚೇತರಿಕೆ ನೀಡುವ ಕಾರ್ಯವನ್ನು ಶ್ಲಾಘಿಸಿದರು. ಈ ಪೂರೈಕೆ ಸರಪಳಿಯು ಚಿಪ್ ತಯಾರಿಕೆಯ ಸಂಶೋಧನೆಯಲ್ಲಿ ಪರಸ್ಪರ ಪ್ರಯೋಜನಕಾರಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಶೂನ್ಯ ಅಥವಾ ಕಡಿಮೆ ಕಾರ್ಬನ್ ಹೊರಸೂಸುವ ವಾಹನಗಳು, ಸಂಪರ್ಕಿತ ಸಾಧನಗಳು, ಎಐ ಮತ್ತು ಡೇಟಾ ಕೇಂದ್ರಗಳಲ್ಲಿ ಪ್ರಗತಿಯನ್ನು ಸಕ್ರಿಯಗೊಳಿಸುತ್ತದೆ ಎಂದು ಉಭಯ ನಾಯಕರು ಹೇಳಿದ್ದಾರೆ.

ಮಾಹಿತಿ ಹಂಚಿಕೆ, ಸೈಬರ್ ಸುರಕ್ಷತೆ ತರಬೇತಿ ಮತ್ತು ಶಕ್ತಿ ಮತ್ತು ದೂರಸಂಪರ್ಕ ಜಾಲಗಳಲ್ಲಿನ ದುರ್ಬಲತೆಯನ್ನು ತಗ್ಗಿಸುವ ಸಹಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಉಭಯ ದೇಶಗಳು ನಿರ್ಧರಿಸಿವೆ ಎಂದು ವರದಿಯಾಗಿದೆ.

 ► ಭಾರತಕ್ಕೆ ಎಂಕ್ಯೂ-9ಬಿ ಡ್ರೋನ್ ಪೂರೈಕೆಗೆ ಅಮೆರಿಕ ಅನುಮೋದನೆ  

 ಡೆಲವೇರ್‍ನಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‍ರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್ ಪೂರೈಕೆ ಸೇರಿದಂತೆ ಭಾರತ-ಅಮೆರಿಕ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿದರು.

ಮೋದಿ ಜತೆಗಿನ ದ್ವಿಪಕ್ಷೀಯ ಸಭೆಯ ಬಳಿಕ ಮಾತನಾಡಿದ ಬೈಡನ್ ` ಭಾರತದ ಕಣ್ಗಾವಲು ಮತ್ತು ವಿಚಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುವ 31 ಜನರಲ್ ಅಟೊಮ್ಯಾಟಿಕ್ ಎಂಕ್ಯೂ-9ಬಿ ಡ್ರೋನ್‍ಗಳ ಖರೀದಿಯನ್ನು ಸ್ವಾಗತಿಸುವುದಾಗಿ' ಹೇಳಿದರು.

ಸುಮಾರು 3.99 ಶತಕೋಟಿ ಡಾಲರ್ ಮೊತ್ತದ 31 ಎಂಕ್ಯೂ-9ಬಿ ಡ್ರೋನ್‍ಗಳನ್ನು ಭಾರತಕ್ಕೆ ಪೂರೈಸುವ ಯೋಜನೆಯನ್ನು ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕ ಅನುಮೋದಿಸಿದೆ. ಒಪ್ಪಂದದ ಪ್ರಕಾರ ಭಾರತದ ನೌಕಾಪಡೆ 15 ಸೀ ಗಾರ್ಡಿಯನ್ ಡ್ರೋನ್‍ಗಳನ್ನು, ಭಾರತದ ವಾಯುಪಡೆ ಮತ್ತು ಭೂಸೇನೆ ತಲಾ 8 ಸ್ಕೈ ಗಾರ್ಡಿಯನ್ ಡ್ರೋನ್‍ಗಳನ್ನು ಪಡೆಯಲಿವೆ. ಜೆಟ್ ಇಂಜಿನ್‍ಗಳು, ಯುದ್ಧ ಸಾಮಾಗ್ರಿಗಳು ಮತ್ತು ನೆಲದ ಚಲನಶೀಲ ವ್ಯವಸ್ಥೆಗೆ ಆದ್ಯತೆಯ ಸಹ-ಉತ್ಪಾದನಾ ವ್ಯವಸ್ಥೆಗಳನ್ನು ಮುನ್ನಡೆಸುವ ಸಹಯೋಗಗಳನ್ನು ಒಳಗೊಂಡಂತೆ ಅಮೆರಿಕ-ಭಾರತ ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿ ಅಡಿಯಲ್ಲಿ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News