ಕ್ಯಾಂಬ್ರಿಡ್ಜ್ ಯೂನಿಯನ್ ಅಧ್ಯಕ್ಷೆಯಾಗಿ ಭಾರತೀಯ ಮೂಲದ ವಿದ್ಯಾರ್ಥಿನಿ ಆಯ್ಕೆ!

Update: 2024-12-10 04:02 GMT

PC: x.com/News9Tweets

ಲಂಡನ್: ವಿಶ್ವದ ಅತ್ಯಂತ ಹಳೆಯ ಚರ್ಚಾ ಸೊಸೈಟಿಗಳಲ್ಲೊಂದಾದ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹಿಸ್ಟಾರಿಕ್ ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿ ಅಧ್ಯಕ್ಷೆಯಾಗಿ ಭಾರತೀಯ ಮೂಲದ ವಿದ್ಯಾರ್ಥಿನಿ ಅನುಷ್ಕಾ ಕಾಳೆ ಆಯ್ಕೆಯಾಗಿದ್ದಾರೆ. ಈ ಸೊಸೈಟಿ 1815ರಿಂದ ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.

ಮುಂದಿನ ಈಸ್ಟರ್ 2025 ಅವಧಿಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 126 ಮತಗಳನ್ನು ಪಡೆದ ಕಾಳೆ, ಅವಿರೋಧವಾಗಿ ಆಯ್ಕೆಯಾದರು. ಈ ಸೊಸೈಟಿಯ ಚರ್ಚಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಅವರು, ವಿಶ್ವವಿದ್ಯಾನಿಲಯದಲ್ಲಿ ಇಂಡಿಯಾ ಸೊಸೈಟಿಯಂಥ ಸಾಂಸ್ಕೃತಿಕ ಸೊಸೈಟಿಗಳ ಜತೆ ಸಂಬಂಧವನ್ನು ಬಲಪಡಿಸುವ ವೇದಿಕೆಯನ್ನು ನಿರ್ವಹಿಸುತ್ತಿದ್ದಾರೆ.

"ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿಗೆ 2025ರ ಈಸ್ಟರ್ ಅವಧಿಗಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ ಹಾಗೂ ಇದು ದೊಡ್ಡ ಗೌರವ. ಎಲ್ಲ ಸದಸ್ಯರ ಬೆಂಬಲಕ್ಕೆ ಕೃತಜ್ಞತೆಗಳು" ಎಂದು ಅನುಷ್ಕಾ ತಿಳಿಸಿದ್ದಾರೆ.

"ನನ್ನ ಅಧಿಕಾರಾವಧಿಯಲ್ಲಿ ವಿಶ್ವವಿದ್ಯಾನಿಲಯ ಇಂಡಿಯಾ ಸೊಸೈಟಿಯಂಥ ಸಾಂಸ್ಕøತಿಕ ಸಂಘಟನೆಗಳ ಜತೆಗೆ ಸಹಭಾಗಿತ್ವ ಹೊಂದಿ ಸಂಘಟನೆಯ ವೈವಿಧ್ಯತೆ ಮತ್ತು ಲಭ್ಯತೆಯನ್ನು ವಿಸ್ತರಿಸಲು ಉದ್ದೇಶಿಸಿದ್ದೇನೆ. ಅಂತರರಾಷ್ಟ್ರೀಯ ಉಪನ್ಯಾಸಗಳನ್ನು ಆಯೋಜಿಸುವುದು ಮತ್ತು ಜಾಗತಿಕ ಚರ್ಚೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯ ಮಂದುವರಿಸಲಿದ್ದೇನೆ" ಎಂದು ವಿವರಿಸಿದ್ದಾರೆ.

ಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಮೆನಾರ್ಡ್ ಕೇನ್ಸ್, ಕಾದಂಬರಿಗಾರ ರಾಬರ್ಟ್ ಹ್ಯಾರೀಸ್, ಕರಣ್ ಬಿಲಿಮೋರಿಯಾ ಅವರಂಥ ಮಹಾನ್ ವ್ಯಕ್ತಿಗಳು ಇದರ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು. ಸೊಸೈಟಿಯು ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೊದೋರ್ ರೂಸ್ವೆಲ್ಟ್, ರೊನಾಲ್ಡ್ ರೇಗನ್, ಬ್ರಿಟನ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್, ಮಾರ್ಗರೇಟ್ ಥ್ಯಾಚರ್, ಜಾನ್ ಮೇಜರ್ ಅವರಂಥ ವಿಶ್ವ ನಾಯಕರು, ಸ್ಟೀಫನ್ ಹಾಕಂಗ್, ಬಿಲ್ ಗೇಟ್ಸ್ ಮತ್ತು ದಲೈ ಲಾಮಾ ಅವರಂಥ ಗಣ್ಯರಿಂದ ಉಪನ್ಯಾಸಗಳನ್ನು ಹಮ್ಮಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News