ಇಸ್ರೇಲ್ ಜೈಲಿನಲ್ಲಿರುವ ಫೆಲಸ್ತೀನ್ ಲೇಖಕನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2024-04-29 05:43 GMT

ಫೆಲಸ್ತೀನಿ ಲೇಖಕ ಬಾಸಿಮ್ ಖಂದಕ್ಜೀ ಹಾಗೂ "ಎ ಮಾಸ್ಕ್ ದ ಕಲರ್ ಆಫ್ ಸ್ಕೈ" ಎಂಬ ಅರೆಬಿಕ್ ಕಾದಂಬರಿ (Photo: X/arabnews)

ಟೆಲ್ ಅವೀವ್: ಇಸ್ರೇಲ್ ನಲ್ಲಿ 20 ವರ್ಷ ಹಿಂದೆ ಸೆರೆಮನೆ ವಾಸ ಶಿಕ್ಷೆಗೆ ಗುರಿಯಾಗಿದ್ದ ಫೆಲಸ್ತೀನಿ ಲೇಖಕ ಬಾಸಿಮ್ ಖಂದಕ್ಜೀ "ಎ ಮಾಸ್ಕ್ ದ ಕಲರ್ ಆಫ್ ಸ್ಕೈ" ಎಂಬ ಅರೆಬಿಕ್ ಕಾದಂಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

2024 ಇಂಟರ್ ನ್ಯಾಷನಲ್ ಪ್ರೈಸ್ ಫಾರ್ ಅರೇಬಿಕ್ ಫಿಕ್ಷನ್ ಪ್ರಶಸ್ತಿಯನ್ನು ಅಬುಧಾಬಿಯಲ್ಲಿ ಪ್ರಕಟಿಸಲಾಗಿದೆ. ಈ ಬಹುಮಾನವನ್ನು ಬಾಸಿಮ್ ಖಂದಕ್ಜೀ ಪರವಾಗಿ ಲೆಬನಾನ್‌ ಮೂಲದ ಪ್ರಕಾಶನ ಸಂಸ್ಥೆ ದಾರುಲ್ ಆದಾಬ್ ನ ಮಾಲಿಕ ರಾಣಾ ಇದ್ರೀಸ್  ಸ್ವೀಕರಿಸಿದರು.

ಇಸ್ರೇಲಿ ಆಕ್ರಮಿತ ಪಶ್ಚಿಮ ದಂಡೆ ನಗರವಾದ ನಬ್ಲಸ್ ನಲ್ಲಿ 1983ರಲ್ಲಿ ಜನಿಸಿದ ಬಾಸಿಮ್ ಖಂದಕ್ಜೀ, ತನ್ನ 21ನೇ ವಯಸ್ಸಿನಲ್ಲಿ 2004ರಲ್ಲಿ ಬಂಧನವಾಗುವವರೆಗೂ ಹಲವು ಸಣ್ಣ ಕಥೆಗಳನ್ನು ಬರೆದಿದ್ದರು. ಟೆಲ್ ಅವೀವ್ ನ ಮೇಲೆ ನಡೆದ ಮಾರಕ ಬಾಂಬ್ ದಾಳಿಗೆ ಸಂಬಂಧಿಸಿದ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿದ್ದುಕೊಂಡೇ ಇಂಟರ್ ನೆಟ್ ಮೂಲಕ ಅಧ್ಯಯನ ಮಾಡಿ ವಿವಿ ಶಿಕ್ಷಣ ಪೂರ್ಣಗೊಳಿಸಿದ್ದರು.

ಈ ಕಾದಂಬರಿಯ ಶೀರ್ಷಿಕೆಯಲ್ಲಿರುವ ಮಾಸ್ಕ್ ಎನ್ನುವುದು ರಮಲ್ಲಾದ ನಿರಾಶ್ರಿತರ ಶಿಬಿರದಲ್ಲಿ ವಾಸವಿದ್ದ ವಾಸ್ತುಶಿಲ್ಪಿ ನೂರ್ ಎಂಬುವವರ ಗುರುತಿನ ಪತ್ರವಾಗಿದ್ದು, ಇಸ್ರೇಲಿಯೊಬ್ಬರ ಹಳೆಯ ಕೋಟ್ ನಲ್ಲಿ ಇದು ಪತ್ತೆಯಾಗಿತ್ತು.

ಈ ಪ್ರಶಸ್ತಿಗೆ ಸಲ್ಲಿಕೆಯಾಗಿದ್ದ 133 ಕೃತಿಗಳ ಪೈಕಿ ಖಂದಕ್ಜಿ ಕೃತಿಯನ್ನು ಆಯ್ಕೆ ಮಾಡಲಾಗಿದೆ. "ಈ ಕಾದಂಬರಿ ಸ್ಥಳಾಂತರ, ಸಾಮೂಹಿಕ ಹತ್ಯೆ ಮತ್ತು ವರ್ಣಬೇಧ ನೀತಿಗೆ ಛಿದ್ರವಾದ ಕುಟುಂಬದ ಸಂಕೀರ್ಣ, ನೈಜ ವಾಸ್ತವ ಸ್ಥಿತಿಯನ್ನು ಬಣ್ಣಿಸುತ್ತದೆ" ಎಂದು ತೀರ್ಪುಗಾರರ ತಂಡದ ಅಧ್ಯಕ್ಷ ನಬೀಲ್ ಸುಲೈಮಾನ್ ಹೇಳಿದ್ದಾರೆ.

"ರಿಚುವಲ್ಸ್ ಆಫ್ ದ ಫಸ್ಟ್ ಟೈಮ್" ಮತ್ತು "ಬ್ರೆತ್ ಆಫ್ ಎ ನಾಕ್ಟರ್ನಲ್ ಪೋಯಮ್"  ಎಂಬ ಕವನ ಸಂಕಲನಗಳನ್ನು ಅವರು ಜೈಲಿನಲ್ಲಿ ಬರೆದಿದ್ದಾರೆ. ಇದಕ್ಕೂ ಮುನ್ನ ಅವರು ಮೂರು ಕಾದಂಬರಿಗಳನ್ನು ಬರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News