ಟ್ರಂಪ್ ಪದಗ್ರಹಣಕ್ಕೆ ಮುನ್ನ ಅಮೆರಿಕಕ್ಕೆ ಮರಳುವಂತೆ ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕನ್ ಶಿಕ್ಷಣಸಂಸ್ಥೆಗಳ ಸೂಚನೆ
ವಾಶಿಂಗ್ಟನ್ : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಕಾರ್ಯಕ್ರಮ ಸಮೀಪಿಸುತ್ತಿರುವಂತೆಯೇ ತಾಯ್ನಾಡಿಗೆ ತೆರಳಿರುವ ವಿದೇಶಿ ವಿದ್ಯಾರ್ಥಿಗಳು ಜಾಗರೂಕತೆ ವಹಿಸುವಂತೆ ಕೆಲವು ಶಿಕ್ಷಣ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಜನವರಿ 20ರಂದು ಟ್ರಂಪ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯುವುದಕ್ಕೆ ಮುನ್ನ ಸ್ವದೇಶಗಳಿಗೆ ತೆರಳಿರುವ ವಿದೇಶಿ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳುವಂತೆ ಕೆಲವು ಶಿಕ್ಷಣಸಂಸ್ಥೆಗಳು ಸಲಹೆ ನೀಡಿವೆ.
ಟ್ರಂಪ್ ಅವರ ಹಿಂದಿನ ಅಧಿಕಾರಾವಧಿಯಲ್ಲಿ ಕೆಲವು ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸಿರುವುದನ್ನು ಈ ಬಾರಿಯೂ ಪುನರಾವರ್ತಿಸುವ ಸಾಧ್ಯತೆಯಿದೆಯೆಂಬ ಆತಂಕಗಳ ನಡುವೆ ವಿವಿಗಳು ಈ ಮುನ್ನೆಚ್ಚರಿಕೆಯನ್ನು ನೀಡಿವೆ.
2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 11 ಲಕ್ಷ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 17 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿರುವ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಕೂಡಾ ಟ್ರಂಪ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಮುನ್ನ ಅಮೆರಿಕಕ್ಕೆ ಮರಳುವಂತೆ ತನ್ನ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದೆ.
ಚೀನಾ ಹಾಗೂ ಭಾರತ ಪ್ರಸಕ್ತ ಟ್ರಂಪ್ ಅವರು ಗುರಿಯಿರಿಸಿರುವ ದೇಶಗಳ ಪಟ್ಟಿಯಲ್ಲಿ ಇಲ್ಲವಾದರೂ, ವಿಶ್ವವಿದ್ಯಾನಿಲಯಗಳು ಕಟ್ಟೆಚ್ಚರವನ್ನು ವಹಿಸಿವೆ. ಚೀನಾ ಹಾಗೂ ಭಾರತ ಸೇರಿದಂತೆ ಕೆಲವು ದೇಶಗಳ ವಿದ್ಯಾರ್ಥಿಗಳ ಆಗಮನಕ್ಕೆ ಟ್ರಂಪ್ ಆಡಳಿತವು ಹೊಸ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆಯೆನ್ನಲಾಗಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 33 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಚೀನಾವನ್ನು ಹಿಂದಿಕ್ಕಿದೆ.