ಪಾಕ್ ವಾಯುದಾಳಿ ಬಳಿಕ ಉಭಯದೇಶಗಳ ಗಡಿಯಲ್ಲಿ ಉದ್ವಿಗ್ನತೆ
ಕಾಬೂಲ್ : ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಸರಕಾರದ ಪಡೆಗಳು ಪಾಕಿಸ್ತಾನದ ಗಡಿಯಾಚೆಯಿಂದ ಅಪ್ರಚೋದಿತ ದಾಳಿಗಳನ್ನು ಆರಂಭಿಸಿದ್ದಾರೆಂದು ಪಾಕ್ ಸೇನಾ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಕುರ‌್ರಂ ಪ್ರದೇಶವನ್ನು ಗುರಿಯಿರಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆಯೆಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಪಾಕಿಸ್ತಾನವು ಪ್ರತೀಕಾರ ದಾಳಿಯನ್ನು ಶನಿವಾರ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಅಫ್ಘಾನ್ ಯೋಧರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಓರ್ವ ಯೋಧ ಕೂಡಾ ಸಾವನ್ನಪ್ಪಿದ್ದು, ಇತರ 9 ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಆಗ್ನೇಯ ಗಡಿಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಉಭಯದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿರುವುದನ್ನು ಅಪ್ಘಾನ್ ರಕ್ಷಣಾ ಸಚಿವಾಲಯ ಕೂಡಾ ಅಧಿಕೃತವಾಗಿ ದೃಢಪಡಿಸಿದೆ.
ಇದರ ಜೊತೆಗೆ ಅಫ್ಘಾನ್ ಸೈನಿಕರು ಗಡಿಯಲ್ಲಿನ ನೆಲೆಗಳಲ್ಲಿ ನಿಯೋಜನೆಗೊಳ್ಳುವುದಕ್ಕೆ ಅವಕಾಶ ಮಾಡಿಕೊಡಲು ಗಡಿ ಪ್ರದೇಶವಾದ ಖೋಸ್ತ್‌ನ ನಿವಾಸಿಗಳು ತಮ್ಮ ಮನೆಗಳನ್ನು ತೊರೆದುಹೋಗುತ್ತಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಶಂಕಿತ ಪಾಕ್ ತಾಲಿಬಾನ್ ಬಂಡುಕೋರ ನೆಲೆಗಳನ್ನು ಗುರಿಯಿರಿಸಿಕೊಂಡು ಪಾಕಿಸ್ತಾನವು ಮಂಗಳವಾರ ರಾತ್ರಿಯಿಡೀ ವಾಯುದಾಳಿಗಳನ್ನು ನಡೆಸಿತ್ತು. ಈ ದಾಳಿಯಲ್ಲಿ ಕೆಲವು ಬಂಡುಕೋರರು ಸಾವನ್ನಪ್ಪಿದ್ದರೆಂದು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನ್ ಗಡಿಯಲ್ಲಿರುವ ಪಾಕ್ ತಾಲಿಬಾನ್ ಬಂಡುಕೋರರ ನೆಲೆಗಳಲ್ಲಿ ಕನಿಷ್ಠ ಎಂಟು ಸ್ಪೋಟದ ಸದ್ದುಗಳು ಕೇಳಿಬಂದಿರುವುದಾಗಿ ಮೂಲಗಳು ತಿಳಿಸಿವೆ.