ಗಾಝಾದ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ | ‘ರೋಗಿಗಳು, ಸಿಬ್ಬಂದಿಯನ್ನು ತೆರವುಗೊಳಿಸಿ ಕಟ್ಟಡಕ್ಕೆ ಬೆಂಕಿ ಹಚ್ಚಿದ ಇಸ್ರೇಲಿ ಸೈನಿಕರು’

Update: 2024-12-28 21:50 IST
Photo of  Gazawar

ಸಾಂದರ್ಭಿಕ ಚಿತ್ರ | PC : PTI/AP

  • whatsapp icon

ಗಾಝಾ: ಸಂಘರ್ಷ ಪೀಡಿತ ಉತ್ತರ ಗಾಝಾದ ಆಸ್ಪತ್ರೆಯೊಂದರ ಮೇಲೆ ಇಸ್ರೇಲಿ ಸೈನಿಕರು ಶನಿವಾರ ದಾಳಿ ನಡೆಸಿದ್ದು, ಅಲ್ಲಿದ್ದ ಸಿಬ್ಬಂದಿ ಹಾಗೂ ರೋಗಿಗಳನ್ನು ತೆರವುಗೊಳಿಸಿದ ಬಳಿಕ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆಂದು ಫೆಲೆಸ್ತೀನ್ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾನು ದಾಳಿ ನಡೆಸಿದ ಆಸ್ಪತ್ರೆಯ ಕಟ್ಟಡವನ್ನು ಹಮಾಸ್ ಹೋರಾಟಗಾರರು ತಮ್ಮ ನೆಲೆಯಾಗಿ ಬಳಸಿಕೊಂಡಿದ್ದರೆಂದು ಇಸ್ರೇಲ್ ಸೇನೆಯು ಹೇಳಿಕೊಂಡಿದೆೆ. ಆದರೆ ಈ ಬಗ್ಗೆ ಅದು ಯಾವುದೇ ಪುರಾವೆಯನ್ನು ನೀಡಿಲ್ಲ.

ಗಾಝಾದ ಆಸುಪಾಸಿನ ಪ್ರದೇಶಗಳಲ್ಲಿ ಹಮಾಸ್ ಹೋರಾಟಗಾರರ ವಿರುದ್ಧ ದಾಳಿ ನಡೆಸುತ್ತಿರುವ ಇಸ್ರೇಲಿ ಪಡೆಗಳು ಕಳೆದ ಮೂರು ತಿಂಗಳುಗಳಲ್ಲಿ ಕಮಲ್ ಆದ್ವಾನ್ ಆಸ್ಪತ್ರೆ ಮೇಲೆ ಹಲವು ಬಾರಿ ದಾಳಿ ನಡೆಸಿವೆ. ಹಮಾಸ್ ಹೋರಾಟಗಾರರು ಹಾಗೂ ಅದರ ಮೂಲಸೌಕರ್ಯಗಳ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ತಾನು ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ದಾಳಿಗೆ ಮುನ್ನ ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿಯನ್ನು ತೆರವುಗೊಳಿಸಿರವುದಾಗಿ ಹೇಳಿದೆ.

ಇಸ್ರೇಲ್ ಸೇನೆಯ ಹೇಳಿಕೆಯನ್ನು ಫೆಲೆಸ್ತೀನ್ ಆರೋಗ್ಯ ಸಚಿವಾಲಯವು ಅಲ್ಲಗಳೆದಿದೆ. ಇಸ್ರೇಲ್ ಸೈನಿಕರು ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳನ್ನು ಅಂಗಣದಲ್ಲಿ ಜಮಾಯಿಸುವಂತೆ ಮತ್ತು ಧರಿಸಿದ್ದ ಉಡುಪುಗಳನ್ನು ಕಳಚುವಂತೆ ತಿಳಿಸಿದ್ದರು. ಅವರಲ್ಲಿ ಕೆಲವರನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಗಿದ್ದರೆ, ಇನ್ನು ಕೆಲವರನ್ನು ಸಮೀಪದ ಇಂಡೋನೇಶ್ಯನ್ ಆಸ್ಪತ್ರೆಗೆ ಕಳುಹಿಸಿದ್ದಾರೆಂದು ಅದು ಹೇಳಿದೆ.

ಅಲ್ಲದೆ ಇಸ್ರೇಲಿ ಸೇನೆಯು ಆಸ್ಪತ್ರೆಯ ಲ್ಯಾಬ್ ಹಾಗೂ ಸರ್ಜರಿ ವಿಭಾಗ ಸೇರಿದಂತೆ ಕಮಲ್ ಆದ್ವಾನ್ ಆಸ್ಪತ್ರೆಯ ವಿವಿಧ ಭಾಗಗಳಿಗೆ ಬೆಂಕಿ ಹಚ್ಚಿದ್ದಾರೆ.

ಆಸ್ಪತ್ರೆಯಲ್ಲಿ 25 ರೋಗಿಗಳು ಹಾಗೂ 60 ಮಂದಿ ಆರೋಗ್ಯ ಕಾರ್ಯಕರ್ತರು ಉಳಿದುಕೊಂಡಿದ್ದರೆಂದು ಅದು ಹೇಳಿದೆ. ಕೆಲವು ರೋಗಿಗಳಿಗೆ ಅಳವಡಿಸಲಾಗಿದ್ದ ಆಮ್ಲಜನಕದ ವ್ಯವಸ್ಥೆಯನು ಕಳಚಿ, ಅವರನ್ನು ಇಸ್ರೇಲ್ ಸೈನಿಕರು ತೆರವುಗೊಳಿಸಿದ್ದಾರೆಂದು ಅದು ಆಪಾದಿಸಿದೆ.

ಆದರೆ ಆಸ್ಪತ್ರೆಗೆ ಬೆಂಕಿ ಹಚ್ಚಿರುವುದನ್ನು ಇಸ್ರೇಲ್ ನಿರಾಕರಿಸಿದೆ. ಆಸ್ಪತ್ರೆಯ ಒಳಗಿರುವ ನಿರ್ಜನ ಕಟ್ಟಡದೊಳಗೆ ಸಣ್ಣ ಬೆಂಕಿ ಅವಘಡ ಸಂಭವಿಸಿದ್ದು, ಅದೀಗ ನಿಯಂತ್ರಣದಲ್ಲಿದೆಯೆಂದು ಇಸ್ರೇಲ್‌ನ ಸೇನಾ ವಕ್ತಾರ ಲೆ. ನಾಡವ್ ಶೋಶಾನಿ ತಿಳಿಸಿದ್ದಾರೆ. ಇಸ್ರೇಲ್ ಸೇನಾ ಕಾರ್ಯಾಚರಣೆಗೂ ಬೆಂಕಿ ಅವಘಡಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News