ಬ್ರಿಟನ್: ರಶ್ಯದ ಮಾಜಿ ಸಚಿವರಿಗೆ 40 ತಿಂಗಳ ಜೈಲುಶಿಕ್ಷೆ

Photo : bbc
ಲಂಡನ್: ಕುಟುಂಬದ ಸದಸ್ಯರಿಂದ ಗಮನಾರ್ಹ ಹಣಕಾಸಿನ ನೆರವು ಪಡೆಯುವ ಮೂಲಕ ಬ್ರಿಟನ್ ನ ನಿರ್ಬಂಧಗಳನ್ನು ಉಲ್ಲಂಘಿಸಿದ ರಶ್ಯದ ಮಾಜಿ ಸಚಿವ ಡಿಮಿಟ್ರಿ ಒವ್ಸಿಯಾನಿಕೊವ್ ಅವರಿಗೆ ಸೌಥ್ವಾರ್ಕ್ ಕ್ರೌನ್ ನ್ಯಾಯಾಲಯ 40 ತಿಂಗಳ ಜೈಲುಶಿಕ್ಷೆ ವಿಧಿಸಿದೆ.
2023ರ ಫೆಬ್ರವರಿ ಮತ್ತು 2024ರ ಜನವರಿ ನಡುವೆ ನಿರ್ಬಂಧಗಳನ್ನು ಉಲ್ಲಂಘಿಸಿದ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಉಕ್ರೇನ್ನಿಂದ ರಶ್ಯ ಸ್ವಾಧೀನಪಡಿಸಿಕೊಂಡಿದ್ದ ಕ್ರಿಮಿಯಾ ಪ್ರಾಂತದ ಸೆವಾಸ್ಟೊಪೊಲ್ ನ ಗವರ್ನರ್ ಆಗಿದ್ದ ಒವ್ಸಿಯಾನಿಕೊವ್ ವಿರುದ್ಧ ಯುರೋಪಿಯನ್ ಯೂನಿನ್ 2017ರಲ್ಲಿ ನಿರ್ಬಂಧ ಜಾರಿಗೊಳಿಸಿತ್ತು. ಈ ಸಂದರ್ಭ ಬ್ರಿಟನ್ ನಲ್ಲಿ ಬ್ಯಾಂಕ್ ಖಾತೆ ತೆರೆದು ತನ್ನ ಪತ್ನಿಯಿಂದ ಉಡುಗೊರೆ ರೂಪದಲ್ಲಿ ಪಡೆದ 97,000 ಡಾಲರ್ ಹಣವನ್ನು ಖಾತೆಗೆ ಜಮಾಗೊಳಿಸಿದ್ದರು. 2019ರಲ್ಲಿ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ರಶ್ಯ ಸರಕಾರದ ಸಚಿವ ಸಂಪುಟಕ್ಕೆ ಮರಳಿದ್ದರು. 2020ರಲ್ಲಿ ಅವರನ್ನು ಸಚಿವ ಸ್ಥಾನದಿಂದ ಮತ್ತು ಯುನೈಟೆಡ್ ರಶ್ಯ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಒವ್ಸಿಯಾನಿಕೊವ್ ತಂದೆ ಬ್ರಿಟನ್ ನಲ್ಲಿ ಜನಿಸಿದ್ದರಿಂದ ಒವ್ಸಿಯಾನಿಕೊವ್ ಬ್ರಿಟನ್ ನ ಪಾಸ್ಪೋರ್ಟ್ ಹೊಂದಿದ್ದು 2023ರಿಂದ ಬ್ರಿಟನ್ ನಲ್ಲಿ ನೆಲೆಸಿದ್ದಾರೆ.