ಫೆಡರಲ್ ಕಾನೂನಿನಡಿ ನೋಂದಾಯಿಸಲು ವಿದೇಶಿ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ದೇಶದಲ್ಲಿ 30 ದಿನಗಳಿಗಿಂತಲೂ ಹೆಚ್ಚಿನ ಸಮಯದಿಂದ ಇರುವ ಎಲ್ಲಾ ವಿದೇಶಿ ಪ್ರಜೆಗಳೂ ಫೆಡರಲ್ ಕಾನೂನಿನಡಿ ನೋಂದಾಯಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ಎಚ್ಚರಿಕೆ ನೀಡಿದ್ದಾರೆ.
`ಏಲಿಯನ್ ರಿಜಿಸ್ಟ್ರೇಷನ್ ಆ್ಯಕ್ಟ್(ಅನ್ಯಲೋಕದ ನೋಂದಣಿ ಕಾಯ್ದೆ)ನ ಪ್ರಕಾರ ಅಮೆರಿಕದಲ್ಲಿ 30 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಇರುವ ವಿದೇಶಿ ಪ್ರಜೆಗಳು ಫೆಡರಲ್ ಸರಕಾರದೊಂದಿಗೆ ನೋಂದಾಯಿಸಬೇಕು. ಇದನ್ನು ಅನುಸರಿಸದಿದ್ದರೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು ದಂಡ, ಜೈಲುಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ನಮ್ಮ ದೇಶದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದವರು ತಕ್ಷಣವೇ ನಿರ್ಗಮಿಸಿದರೆ ಸ್ವತಂತ್ರವಾಗಿ ಬದುಕುವ ಮತ್ತು ಭವಿಷ್ಯದಲ್ಲಿ ಅಮೆರಿಕದ ನೆಲಕ್ಕೆ ಕಾಲಿರಿಸುವ ಅವಕಾಶವಿದೆ. ಇದಕ್ಕೆ ತಪ್ಪಿದವರನ್ನು ಬಂಧಿಸಿ, ದಂಡ ವಿಧಿಸಿ ಗಡೀಪಾರು ಮಾಡಲಾಗುತ್ತದೆ ಮತ್ತು ಮುಂದೆಂದಿಗೂ ಅಮೆರಿಕದ ನೆಲಕ್ಕೆ ಕಾಲಿಡಲು ಅವಕಾಶ ಇರುವುದಿಲ್ಲ. ತಾಯ್ನಾಡಿನ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ, ನಮ್ಮ ದೇಶದಲ್ಲಿ ಯಾರಿದ್ದಾರೆ ಎಂಬುದು ನಮಗೆ ತಿಳಿಯಬೇಕಿದೆ ' ಎಂದು ಕ್ರಿಸ್ಟಿ ನೊಯೆಮ್ ಹೇಳಿದ್ದಾರೆ.