ಯುರೋಪ್ ಒಕ್ಕೂಟದಿಂದ ಮಹ್ಸಾ ಅಮಿನಿಗೆ ‘ಸಖಾರೋವ್’ ಪುರಸ್ಕಾರ ; ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬಿಕರಿಗೆ ಅನುಮತಿ ನಿರಾಕರಿಸಿದ ಇರಾನ್

Update: 2023-12-12 17:56 GMT

Photo | AP

ಸ್ಟ್ರಾಟ್ಸ್ಬರ್ಗ್: ಇರಾನ್ ನಲ್ಲಿ ಕಳೆದ ವರ್ಷ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಖುರ್ದಿಷ್ ಯುವತಿ ಮಹ್ಸಾ ಅಮಿನಿಗೆ ಯುರೋಪ್ ಒಕ್ಕೂಟವು ಮಂಗಳವಾರ ‘ಸಖಾರೋವ್’ ಚಿಂತನಾ ಸ್ವಾತಂತ್ರ್ಯದ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಆದರೆ ಇರಾನ್ ಆಡಳಿತವು ಆಕೆಯ ಕುಟುಂಬಿಕರಿಗೆ ನಿರ್ಬಂಧ ವಿಧಿಸಿದ್ದರಿಂದ ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ವಸ್ತ್ರಸಂಹಿತೆಯ ಉಲ್ಲಂಘನೆಯ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ಮಹ್ಸಾ ಅವರ ಸಾವಿನ ಘಟನೆಯು ಇರಾನ್‌ ನಲ್ಲಿ ವ್ಯಾಪಕ ಸರಕಾರಿ ವಿರೋಧಿ ಪ್ರತಿಭಟನೆಗೆ ಕಾರಣವಾಗಿತ್ತು.

ಇರಾನ್‌ ನ ಸಂಪ್ರದಾಯವಾದಿ ಸರಕಾರದ ನೀತಿಯನ್ನು ಪ್ರಶ್ನಿಸಿದ್ದಕ್ಕಾಗಿ ಮಹ್ಸಾ ಅಮಿನಿಗೆ ಮರಣೋತ್ತರವಾಗಿ ಹಕ್ಕುಗಳ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಫ್ರಾನ್ಸ್ ನ ಸ್ಟ್ರಾಟ್ಸ್ ಬರ್ಗ್ ನಲ್ಲಿನ ಯುರೋಪ್ ಸಂಸತ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಹ್ಸಾ ಅಮಿನಿಯ ತಾಯಿ, ತಂದೆ ಹಾಗೂ ಸಹೋದರರು ಪಾಲ್ಗೊಳ್ಳಲಿದ್ದರು. ಆದರೆ ಇರಾನ್‌ ನ ಅಧಿಕಾರಿಗಳು ಅವರ ಪಾಸ್ಪೋರ್ಟ್‌ ಗಳನ್ನು ಕಿತ್ತುಕೊಂಡಿದ್ದರಿಂದ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಿಲ್ಲ.

ಮಹಿಳೆಯರ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಇರಾನ್‌ ನ ಧಾರ್ಮಿಕ ಪೊಲೀಸರು 22 ವರ್ಷದ ಮಹ್ಸಾ ಅಮಿನಿಯನ್ನು 2022ರ ಸೆಪ್ಟೆಂಬರ್ 16ರಂದು ಕಸ್ಟಡಿಗೆ ತೆಗೆದುಕೊಂಡಿದ್ದರು. ಪೊಲೀಸ್ ವಶದಲ್ಲಿರುವಾಗಲೇ ಆಕೆ ಸಾವನ್ನಪ್ಪಿದ್ದರು.

ಮಹ್ಸಾ ಅಮಿನಿಯ ಸಾವು ಇರಾನ್‌ ನಲ್ಲಿ ಭಾರೀ ಪ್ರತಿಭಟನೆಯನ್ನು ಕಿಚ್ಚನ್ನು ಹೊತ್ತಿಸಿತ್ತು. ‘ಮಹಿಳೆ, ಬದುಕು, ಸ್ವಾತಂತ್ರ್ಯ’ ಎಂಬ ಘೋಷಣೆಯೊಂದಿಗೆ ಭುಗಿಲೆದ್ದ ಈ ಪ್ರತಿಭಟನೆಯು ಇರಾನ್‌ ನ ಮತೀಯವಾದಿ ಸರಕಾರದ ಪದಚ್ಯುತಿಗೆ ಆಗ್ರಹಿಸಿತ್ತು.

ಆನಂತರ ಇರಾನ್‌ ನ ಭದ್ರತಾಪಡೆಗಳು ಹಿಂಸಾತ್ಮಕವಾಗಿ ಪ್ರತಿಭಟನೆಯನ್ನು ಹತ್ತಿಕ್ಕಿದ್ದವು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು.

ಇರಾನ್ ವಿರುದ್ಧ ಇಯು ಸಂಸರ ಆಕ್ರೋಶ

ಮಹ್ಸಾ ಅಮಿನಿಗೆ ಮರಣೋತ್ತರವಾಗಿ ನೀಡಲಾದ ಸಖಾರೊವ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಕೆಯ ಕುಟುಂಬಿಕರಿಗೆ ಇರಾನ್ ಆಡಳಿತ ಅವಕಾಶ ನೀಡದೆ ಇದ್ದುದಕ್ಕಾಗಿ ಯುರೋಪ್ ಒಕ್ಕೂಟದ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹ್ಸಾ ಅಮಿನಿ ಅವರ ಬೆಂಬಲಿಗರನ್ನು ಹತ್ತಿಕ್ಕಲು ಟೆಹರಾನ್ ಬಯಸುತ್ತಿದೆಯೆಂದು ಅವರು ಹೇಳಿದ್ದಾರೆ.

ಈ ನಿರ್ಬಂಧವು ಜಿನಾ ಮಹ್ಸಾ ಅಮಿನಿ ಅವರ ಕುಟುಂಬಿಕರನ್ನು ಮೌನವಾಗಿಸುವ ಉದ್ದೇಶವನ್ನು ಹೊಂದಿದೆ.ಇರಾನ್‌ ನಲ್ಲಿ ಮಹಿಳೆಯರ ಹಕ್ಕುಗಳು, ಮಾನವಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯದ ದಮನದ ಬಗ್ಗೆ ಅವರು ಮಾತನಾಡದಂತೆ ತಡೆಯಲಾಗಿದೆ’’

ಎಂದು ಯುರೋಪ್ ಒಕ್ಕೂಟದ 116 ಸಂಸದರು ಪತ್ರವೊಂದರಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News