ಇಸ್ರೇಲ್ ಜೊತೆಗಿನ ಎಲ್ಲಾ ವ್ಯಾಪಾರ ಸ್ಥಗಿತಗೊಳಿಸಲು ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಕರೆ

Update: 2023-11-01 18:04 GMT

 ಆಯತುಲ್ಲಾ ಅಲಿ ಖಾಮಿನೈ (Photo: NDTV)

ಟೆಹರಾನ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಗೆ ಪ್ರತಿಕ್ರಿಯೆಯಾಗಿ ಆ ದೇಶದ ಜೊತೆ ನಡೆಸುತ್ತಿರುವ ತೈಲ ರಫ್ತು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರಗಳನ್ನು ಸ್ಥಗಿತಗೊಳಿಸಬೇಕೆಂದು ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಮುಸ್ಲಿಂ ರಾಷ್ಟ್ರಗಳಿಗೆ ಬುಧವಾರ ಕರೆ ನೀಡಿದ್ದಾರೆ.

ಟೆಹರಾನ್‌ನಲ್ಲಿ ವಿದ್ಯಾರ್ಥಿಗಳ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಅಪರಾಧಗಳನ್ನು ಎಸಗುವುದನ್ನು ಕೊನೆಗೊಳಿಸುವಂತೆ ಮುಸ್ಲಿಂ ರಾಷ್ಟಗಳ ಸರಕಾರಗಳು ಇಸ್ರೇಲ್‌ಗೆ ತಾಕೀತು ಮಾಡಬೇಕೆಂದು ಅವರು ಹೇಳಿದರು.

‘‘ಬ್ರಿಟನ್, ಫ್ರಾನ್ಸ್ ಹಾಗೂ ಅಮೆರಿಕ ಸೇರಿದಂತೆ ಪಾಶ್ಚಾತ್ಯ ಸರಕಾರಗಳು ಫೆಲೆಸ್ತೀನ್ ವಿರುದ್ಧ ನಿಂತಿವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಗಾಝಾದ ಜನರ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆಂಬುದನ್ನು ಮುಸ್ಲಿಂ ಜಗತ್ತು ಮರೆಯಕೂಡದು. ಈ ಯುದ್ಧವು ಕೇವಲ ಯೆಹೂದ್ಯಪಾರಮ್ಯವಾದಿ ಸರಕಾರದ ವಿರುದ್ಧ ಮಾತ್ರವೇ ಅಲ್ಲ’’ ಎಂದವರು ಹೇಳಿದರು.

ಇಸ್ರೇಲ್‌ಗೆ ನೆರವಾಗುತ್ತಿರುವ ಕೆಲವು ರಾಷ್ಟ್ರಗಳು ಮುಸ್ಲಿಮರನ್ನು ರೋಷತಪ್ತಗೊಳಿಸದಂತೆ ಜಾಗರೂಕತೆ ವಹಿಸಬೇಕೆಂದು ರಕ್ಷಣಾ ಸಚಿವ ಮುಹಮ್ಮದ್ ರೆಝಾ ಎಚ್ಚರಿಕೆ ನೀಡಿದ್ದಾರೆ.

ಹಮಾಸ್‌ಗೆ ಇರಾನ್ ಆರ್ಥಿಕವಾಗಿ ಹಾಗೂ ಮಿಲಿಟರಿ ನೆರವನ್ನು ನೀಡುತ್ತಿದೆ ಹಾಗೂ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಮೇಲೆ ನಡೆಯುವ ದಾಳಿಗಳಿಗೆ ಇರಾನ್ ಸಕ್ರಿಯವಾಗಿ ನೆರವಾಗುತ್ತಿದೆಯೆಂದು ಶ್ವೇತಭವನ ಈ ಹಿಂದೆ ಆಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News