ಲೆಬನಾನ್ ಕದನ ವಿರಾಮ ಮಾತುಕತೆಗೆ ಇರಾನ್ ಬೆಂಬಲ
ಬೈರೂತ್: ಇಸ್ರೇಲ್ ಜತೆಗೆ ಕದನ ವಿರಾಮ ಸಾಧ್ಯವಾಗಿಸುವ ನಿಟ್ಟಿನಲ್ಲಿ ಲೆಬನಾನ್ ಕೈಗೊಳ್ಳುವ ಯಾವುದೇ ನಿರ್ಧಾರವನ್ನೂ ಇರಾನ್ ಬೆಂಬಲಿಸುತ್ತದೆ. ಲೆಬನಾನ್‍ನಲ್ಲಿನ ಸಮಸ್ಯೆ ಅಂತ್ಯಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಇರಾನ್ ಹೇಳಿದೆ.
ಲೆಬನಾನ್ ರಾಜಧಾನಿ ಬೈರೂತ್‍ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳ ಭದ್ರಕೋಟೆಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಹಿಜ್ಬುಲ್ಲಾಗಳಿಗೆ ಭಾರೀ ಹಿನ್ನಡೆಯಾಗಿದೆ. ಈ ಮಧ್ಯೆ, ಲೆಬನಾನ್‍ನಲ್ಲಿ ಕದನ ವಿರಾಮದ ಕುರಿತ ಕರಡು ಪ್ರಸ್ತಾವನೆಯನ್ನು ಅಮೆರಿಕದ ರಾಯಭಾರಿ ಲೆಬನಾನ್ ಸಂಸತ್‍ನ ಸ್ಪೀಕರ್ ನಬೀಹ್ ಬೆರ್ರಿಗೆ ಹಸ್ತಾಂತರಿಸಿದ್ದರು. ಈ ಪ್ರಸ್ತಾವನೆಯ ಬಗ್ಗೆ ಬೆರ್ರಿ ಶುಕ್ರವಾರ ಇರಾನ್‍ನ ಹಿರಿಯ ಅಧಿಕಾರಿ ಅಲಿ ಲರಿಜಾನಿ ಜತೆ ಚರ್ಚೆ ನಡೆಸಿದರು. ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲರಿಜಾನಿ ಕದನ ವಿರಾಮದ ಬಗ್ಗೆ ಲೆಬನಾನ್ ಕೈಗೊಳ್ಳುವ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದರು.
ಅಮೆರಿಕದ ಯೋಜನೆಯನ್ನು ದುರ್ಬಲಗೊಳಿಸಲು ಲೆಬನಾನ್‍ಗೆ ಬಂದಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ `ನಾವು ಯಾವುದನ್ನೂ ಹಾಳು ಮಾಡಲು ನೋಡುತ್ತಿಲ್ಲ. ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕೆ ಆದ್ಯತೆ ನೀಡುತ್ತೇವೆ. ಅಡ್ಡಪಡಿಸುವವರು ನೆತನ್ಯಾಹು ಮತ್ತು ಅವರ ಜನರು' ಎಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.
ಇದಕ್ಕೂ ಮುನ್ನ ಲರಿಜಾನಿ ಜತೆಗಿನ ಮಾತುಕತೆ ಸಂದರ್ಭ ಲೆಬನಾನ್‍ನ ಉಸ್ತುವಾರಿ ಪ್ರಧಾನಿ ನಜೀಬ್ ಮಿಕಾತಿ `ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ 1701ನ್ನು ಅನುಷ್ಟಾನಗೊಳಿಸುವ ಮತ್ತು ಇಸ್ರೇಲ್‍ನ ಆಕ್ರಮಣವನ್ನು ನಿಲ್ಲಿಸುವ ಕುರಿತಂತೆ ಲೆಬನಾನ್‍ನ ನಿಲುವನ್ನು ಬೆಂಬಲಿಸುವಂತೆ ಆಗ್ರಹಿಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.