ಇರಾಕ್ | ಅಮೆರಿಕದ ರಾಜತಾಂತ್ರಿಕ ಕಚೇರಿಯ ಮೇಲೆ ರಾಕೆಟ್ ದಾಳಿ
ಬಗ್ದಾದ್ : ಇರಾಕ್ ರಾಜಧಾನಿ ಬಗ್ದಾದ್‍ನಲ್ಲಿರುವ ರಾಜತಾಂತ್ರಿಕ ಸೇವೆಗಳ ಕಚೇರಿಯ ಮೇಲೆ ಮಂಗಳವಾರ ರಾತ್ರಿ ರಾಕೆಟ್ ದಾಳಿ ನಡೆದಿದೆ. ಆದರೆ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಬಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಕ್ಯಾಂಪ್ ವಿಕ್ಟರಿ ಸೇನಾನೆಲೆಯಲ್ಲಿನ ರಾಜತಾಂತ್ರಿಕ ಸೇವಾ ಕಚೇರಿಯ ಆವರಣದ ಬಳಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ (ಸ್ಥಳೀಯ ಕಾಲಮಾನ) ಎರಡು ರಾಕೆಟ್‍ಗಳು ಅಪ್ಪಳಿಸಿವೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ವರದಿಯಾಗಿಲ್ಲ. ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಭದ್ರತಾ ಪಡೆಯ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಅವರು ಇರಾಕ್‍ಗೆ ಬುಧವಾರ ಭೇಟಿ ನೀಡುವ ಸಂದರ್ಭದಲ್ಲೇ ನಡೆದಿರುವ ದಾಳಿಯು ಇರಾನ್ ಅಧ್ಯಕ್ಷರ ಪ್ರವಾಸಕ್ಕೆ ಅಡ್ಡಿತರುವ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ವಿಸ್ತೃತ ತನಿಖೆ ನಡೆಸಿ ದಾಳಿಯ ಹೊಣೆಗಾರರನ್ನು ಗುರುತಿಸಬೇಕು ಎಂದು ಇರಾಕ್‍ನಲ್ಲಿರುವ ಇರಾನ್ ಮೂಲದ ಸಶಸ್ತ್ರ ಹೋರಾಟಗಾರರ ಗುಂಪು ಕತೀಬ್ ಹಿಜ್ಬುಲ್ಲಾ ಆಗ್ರಹಿಸಿದೆ.