ಇರಾಕ್ : ಇರಾನ್ ಬೆಂಬಲಿತ ಪಡೆಯ ಮೇಲೆ ಅಮೆರಿಕ ಪ್ರತಿದಾಳಿ ; ಓರ್ವ ಮೃತ್ಯು, 24 ಮಂದಿಗೆ ಗಾಯ

Update: 2023-12-26 17:55 GMT

ಬಗ್ದಾದ್: ಉತ್ತರ ಇರಾಕ್ ನಲ್ಲಿ ಸೋಮವಾರ ಇರಾನ್ ಬೆಂಬಲಿತ ಹಿಜ್ಬುಲ್ಲಾ ಪಡೆಯ ದಾಳಿಯಲ್ಲಿ ಅಮೆರಿಕದ ಮೂವರು ಯೋಧರು ತೀವ್ರವಾಗಿ ಗಾಯಗೊಂಡಿರುವುದಕ್ಕೆ ಪ್ರತಿಯಾಗಿ ಮಂಗಳವಾರ ಅಮೆರಿಕವು ಹಿಜ್ಬುಲ್ಲಾ ಪಡೆಗಳ ಮೂರು ನೆಲೆಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಓರ್ವ ಸದಸ್ಯ ಮೃತಪಟ್ಟಿದ್ದು ಇತರ 24 ಮಂದಿ ಗಾಯಗೊಂಡಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಉತ್ತರ ಇರಾಕ್‌ ನ ಬ್ಯಬಿಲೋನ್ ಪ್ರಾಂತದ ಹಿಲ್ಲಾ ನಗರದಲ್ಲಿ ಹಷೆದ್ ಅಲ್ಶಾಂಬಿ ನೆಲೆಯನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಒಬ್ಬ ಹೋರಾಟಗಾರ ಮೃತಪಟ್ಟಿದ್ದು ಇತರ 20 ಮಂದಿ ಗಾಯಗೊಂಡಿದ್ದಾರೆ. ಬ್ಯಬಿಲೋನ್ನ ದಕ್ಷಿಣದ ವಾಸಿಟ್ ಪ್ರಾಂತದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ 4 ಮಂದಿ ಗಾಯಗೊಂಡಿರುವುದಾಗಿ ಇರಾಕ್‌ ನ ಆಂತರಿಕ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇರಾಕ್ ನ ಹಿಜ್ಬುಲ್ಲಾ ಮತ್ತು ಸಂಯೋಜಿತ ಗುಂಪುಗಳ ನೆಲೆಯನ್ನು ಗುರಿಯಾಗಿಸಿ ಅಮೆರಿಕದ ರಕ್ಷಣಾ ಪಡೆ ಪ್ರತೀಕಾರದ ದಾಳಿ ನಡೆಸಿದೆ. ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳು ಅಮೆರಿಕದ ಸಿಬಂದಿಗಳನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಈ ನಿಖರ ಪ್ರಹಾರ ನೀಡಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

`ಅಮೆರಿಕದ ರಕ್ಷಣೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲೂ ಅಧ್ಯಕ್ಷ ಬೈಡನ್ ಹಿಂಜರಿಯುವುದಿಲ್ಲ. ನಮ್ಮ ಪಡೆಗಳು, ನಮ್ಮ ಹಿತಾಸಕ್ತಿಗಳ ರಕ್ಷಣೆಯನ್ನು ಹೊರತುಪಡಿಸಿ ಬೇರೆ ಯಾವುದೇ ಆದ್ಯತೆ ನಮಗಿಲ್ಲ. ಈ ವಲಯದಲ್ಲಿ ಸಂಘರ್ಷ ಉಲ್ಬಣಿಸುವುದನ್ನು ನಾವು ಬಯಸುವುದಿಲ್ಲ, ನಮ್ಮ ಜನತೆ, ನಮ್ಮ ವ್ಯವಸ್ಥೆಯನ್ನು ರಕ್ಷಿಸಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ ಮತ್ತು ಸನ್ನದ್ಧರಾಗಿದ್ದೇವೆ ಎಂದು ಹೇಳಿಕೆ ತಿಳಿಸಿದೆ.

ಇರಾಕ್‌ ನಗರದಲ್ಲಿ ಹಿಜ್ಬುಲ್ಲಾದ ಸಂಯೋಜಿತ ಪಡೆಯು ಇರಾನ್ ನ ಸಶಸ್ತ್ರ ಪಡೆಯ ಬೆಂಬಲದಿಂದ 2007ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇರಾಕ್‌ ನಲ್ಲಿರುವ ಅಮೆರಿಕ ನೇತೃತ್ವದ ಮೈತ್ರಿ ಪಡೆಯ ವಿರುದ್ಧ ದಾಳಿ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ 2009ರಲ್ಲಿ ಗುಂಪನ್ನು `ವಿದೇಶಿ ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದ ಅಮೆರಿಕ, ಅದರ ಪ್ರಧಾನ ಕಾರ್ಯದರ್ಶಿ ಅಬು ಮಹ್ದಿ ಅಲ್ಮುಹಾಂದಿಸ್ ವಿರುದ್ಧ ನಿರ್ಬಂಧ ಜಾರಿಗೊಳಿಸಿದೆ. ಗಾಝಾದಲ್ಲಿ ಅಮೆರಿಕದ ಮಿತ್ರ ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷ ಭುಗಿಲೆದ್ದ ಬಳಿಕ ಮಧ್ಯಪ್ರಾಚ್ಯದಲ್ಲಿ ಅಮೆರಿಕ ವಿರುದ್ಧ ವ್ಯಾಪಕ ಆಕ್ರೋಶ ಹೊರಹೊಮ್ಮಿದೆ.

ಈ ವಲಯದಲ್ಲಿ ಅಮೆರಿಕದ ಪಡೆಗಳ ಉಪಸ್ಥಿತಿಗೆ ಭಾರೀ ವಿರೋಧ ವ್ಯಕ್ತವಾಗಿದೆ. 2004ರಲ್ಲಿ ಇರಾಕ್ ಮತ್ತು ಸಿರಿಯಾದ ದೊಡ್ಡ ಪ್ರದೇಶವನ್ನು ವಶಪಡಿಸಿಕೊಂಡಿದ್ದ ಐಸಿಸ್ ನ ಪುನರುತ್ಥಾನವನ್ನು ತಡೆಯಲು ಪ್ರಯತ್ನಿಸುತ್ತಿರುವ ಸ್ಥಳೀಯ ಪಡೆಗೆ ಸಲಹೆ ಮತ್ತು ಸಹಾಯ ನೀಡುವ ಉದ್ದೇಶದಿಂದ ಇರಾಕ್‌ ನದಲ್ಲಿ ಸುಮಾರು 2,500, ಸಿರಿಯಾದಲ್ಲಿ ಸುಮಾರು 900 ಯೋಧರನ್ನು ನಿಯೋಜಿಸಿರುವುದಾಗಿ ಅಮೆರಿಕ ಪ್ರತಿಪಾದಿಸುತ್ತಿದೆ.

ಅಮೆರಿಕ ದಾಳಿಗೆ ಇರಾಕ್ ಖಂಡನೆ

ಬಗ್ದಾದ್: ಇರಾಕ್‌ ನವಲ್ಲಿರುವ ಮಿಲಿಟರಿ ನೆಲೆಗಳ ಮೇಲೆ ಸೋಮವಾರ ರಾತ್ರಿ ಅಮೆರಿಕ ನಡೆಸಿದ ದಾಳಿಯು ಇರಾಕ್‌ ನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ' ಎಂದು ಇರಾಕ್ ಸರಕಾರ ಖಂಡಿಸಿದೆ.

ಅಮೆರಿಕದ ದಾಳಿಯು ಇರಾಕ್ ಸಾರ್ವಭೌಮತ್ವದ ಸ್ವೀಕಾರಾರ್ಹವಲ್ಲದ ಉಲ್ಲಂಘನೆಯಾಗಿದೆ. ಇದೇ ವೇಳೆ, ಇರಾಕ್ ನಲ್ಲಿರುವ ಅಮೆರಿಕ ನೇತೃತ್ವದ ಮೈತ್ರಿ ಪಡೆಯ ನೆಲೆಯನ್ನು ಗುರಿಯಾಗಿಸಿ ಸಶಸ್ತ್ರ ಗುಂಪು ನಡೆಸಿದ ಕೃತ್ಯವು ಸ್ಪಷ್ಟವಾಗಿ ಹಗೆತನದ ಕೃತ್ಯವಾಗಿದೆ ಎಂದು ಇರಾಕ್ ಸರಕಾರ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News