FACT CHECK | ಇಸ್ರೇಲ್ ಅಕ್ರಮ ರಾಷ್ಟ್ರವೆಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿರುವುದು ನಿಜವೇ?
ಬೆಂಗಳೂರು: ಇಸ್ರೇಲನ್ನು ಅಕ್ರಮರಾಷ್ಟ್ರ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಘೋಷಿಸಿದೆ ಹಾಗೂ ಇನ್ನು ಮಂದೆ ಈ ದೇಶಕ್ಕೆ ಸಾರ್ವಭೌಮ ರಾಷ್ಟ್ರ ಎಂಬ ಮಾನ್ಯತೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ ಸ್ಥಳೀಯ ಗುಂಪುಗಳಲ್ಲಿ ಪ್ರಸಾರವಾಗುತ್ತಿದೆ.
ಈ ವಿಡಿಯೊದಲ್ಲಿ ಫೆಲಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಲಿಕಿ ಮಾತನಾಡುತ್ತಿದ್ದು, ಆನ್ ಲೈನಲ್ಲಿ ಗೊಂದಲ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ ಈ ವಿಡಿಯೊ ಹಿಂದಿನ ಸತ್ಯಾಂಶ ಭಿನ್ನವಾಗಿದೆ.
2024ರ ಜುಲೈ ತಿಂಗಳ ವಿಡಿಯೊ ಇದಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಸಚಿವರು, ಅಂತರಾಷ್ಟ್ರೀಯ ನ್ಯಾಯಾಲಯದ ನಿರ್ಧಾರ ಫೆಲಸ್ತೀನ್, ನ್ಯಾಯ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಜಯ ಸಿಕ್ಕಿದ ಅಪೂರ್ವ ಕ್ಷಣ ಎಂದು ಬಣ್ಣಿಸುತ್ತಿದ್ದಾರೆ. ಇದೀಗ ಐಸಿಜೆ ಇಸ್ರೇಲನ್ನು ಅಕ್ರಮ ರಾಷ್ಟ್ರ ಎಂದು ಬಣ್ಣಿಸಿದ್ದು, ಇದು ಫೆಲಸ್ತೀನಿಗೆ ದೊರಕಿದ ನ್ಯಾಯ ಎಂಬ ಅರ್ಥದಲ್ಲಿ ಬಿಂಬಿಸಲಾಗುತ್ತಿದೆ.
ಆದರೆ ಇಸ್ರೇಲ್ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡಿರುವುದು ಅಂತರಾಷ್ಟ್ರೀಯ ಕಾನೂನುಗಳ ಪ್ರಕಾರ ಕಾನೂನುಬಾಹಿರ. ಆದ್ದರಿಂದ ಹಾಲಿ ಇರುವ ವಸಾಹತುಗಳನ್ನು ಕಿತ್ತುಹಾಕಲು ಮತ್ತು ಹೊಸ ವಸಾಹತು ನಿರ್ಮಾಣವನ್ನು ಕೊನೆಗೊಳಿಸಬೇಕು ಎಂದು ಐಸಿಜೆ ವಾಸ್ತವವಾಗಿ ಹೇಳಿತ್ತು.
ಇದೀಗ ಇದನ್ನು ತಪ್ಪಾಗಿ ಬಿಂಬಿಸಿರುವ ವಿಡಿಯೊ ತಪ್ಪುದಾರಿಗೆ ಎಳೆಯುವಂಥದ್ದು ಮತ್ತು ಸಂಘರ್ಷಕ್ಕೆ ಕಾರಣವಾಗುವಂಥದ್ದು. ಇಸ್ರೇಲ್ನ ನಿರ್ದಿಷ್ಟ ಕ್ರಮಕ್ಕೆ ಐಸಿಜೆ ಅಕ್ರಮ ಅಥವಾ ಕಾನೂನುಬಾಹಿರ ಎಂದು ಹೇಳಿದೆಯೇ ವಿನಃ ವಿಡಿಯೊದಲ್ಲಿ ಹೇಳಿದಂತೆ ಇಡೀ ರಾಷ್ಟ್ರವನ್ನೇ ಅಕ್ರಮ ಎಂದು ಎಲ್ಲೂ ಹೇಳಿಲ್ಲ.