ಗಾಝಾ ವಿರುದ್ಧ ಇಸ್ರೇಲ್ ನಿಂದ `ಜನಾಂಗೀಯ' ಕಾರ್ಯಾಚರಣೆ
ವಿಶ್ವಸಂಸ್ಥೆ: ಗಾಝಾ ಪಟ್ಟಿಯ ಮೇಲಿನ ಇಸ್ರೇಲ್ ನ ಬಾಂಬ್ದಾಳಿ ಹಾಗೂ ಹಮಾಸ್ ನಿಯಂತ್ರಣದಲ್ಲಿರುವ ಫೆಲೆಸ್ತೀನ್ ಭೂಪ್ರದೇಶದ ಮೇಲೆ ಸಂಪೂರ್ಣ ಮುತ್ತಿಗೆಯನ್ನು ಹೇರುವ ಇಸ್ರೇಲ್ ನ ಪ್ರತಿಜ್ಞೆ ಜನಹತ್ಯೆಗೆ ಸಮವಾಗಿದೆ ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ರಾಯಭಾರಿ ಪ್ರತಿಪಾದಿಸಿದ್ದಾರೆ.
ಸುಮಾರು 2.3 ದಶಲಕ್ಷ ಜನರು ವಾಸಿಸುತ್ತಿರುವ ಗಾಝಾಕ್ಕೆ ಆಹಾರ ಮತ್ತು ಇಂಧನ ಪೂರೈಕೆಗೆ ಸಂಪೂರ್ಣ ದಿಗ್ಬಂಧನ ವಿಧಿಸುವುದಾಗಿ ಇಸ್ರೇಲ್ ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಘೋಷಿಸಿರುವುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
`ಈ ರೀತಿಯ ಬಹಿರಂಗ ಅಮಾನವೀಯತೆ ಮತ್ತು ಜನರನ್ನು ಶರಣಾಗತಿಗೆ ಬಲವಂತಗೊಳಿಸುವ ಬಾಂಬ್ ದಾಳಿ, ಉಪವಾಸ ಕೆಡವುದನ್ನು ಯುದ್ಧದ ತಂತ್ರವಾಗಿ ಬಳಸಿಕೊಳ್ಳುವುದು ಮತ್ತು ರಾಷ್ಟ್ರೀಯ ಅಸ್ತಿತ್ವವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳು ನರಮೇಧಕ್ಕಿಂತ ಕಡಿಮೆಯಲ್ಲ. ಈ ಕೃತ್ಯಗಳು ಯುದ್ಧಾಪರಾಧವಾಗಿವೆ ' ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಮಂಗಳವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿರುವುದಾಗಿ `ರಾಯ್ಟರ್ಸ್' ವರದಿ ಮಾಡಿದೆ.
ಮಂಗಳವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ` ನನಗೆ ತಿಳಿದಿರುವಂತೆ, ಮುತ್ತಿಗೆಯ ಪರಿಕಲ್ಪನೆಯನ್ನು ವಾಸ್ತವವಾಗಿ ಇಸ್ರೇಲ್ ಸರಕಾರ ಕಾರ್ಯರೂಪಕ್ಕೆ ತರುವುದಿಲ್ಲ. ಈ ವಿಷಯದಲ್ಲಿ ಅವರ ಕ್ರಮಗಳ ಬಗ್ಗೆ ಅಮೆರಿಕ ಸರಕಾರ ಇಸ್ರೇಲ್ ಜತೆ ಮಾತನಾಡಿದೆ' ಎಂದಿದ್ದಾರೆ. `ಮಂಗಳವಾರ ಅಧ್ಯಕ್ಷ ಜೋ ಬೈಡನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಮಾತನಾಡಿದ್ದು ಹಮಾಸ್ ವಿರುದ್ಧದ ಪೂರ್ಣಪ್ರಮಾಣದ ಪ್ರಹಾರದ ಸಂದರ್ಭ ಅಮಾಯಕ ನಾಗರಿಕರು ಹಾಗೂ ಭಯೋತ್ಪಾದಕರನ್ನು ಗುರುತಿಸುವ ಬಗ್ಗೆ ಚರ್ಚಿಸಿದ್ದಾರೆ' ಎಂದು ಸುಲಿವಾನ್ ಹೇಳಿದ್ದಾರೆ.
ಹಮಾಸ್ ಯುದ್ಧಾಪರಾಧ ಎಸಗುತ್ತಿದ್ದು ಇದು ಹಮಾಸ್ ಭಯೋತ್ಪಾದಕ ಮೂಲಸೌಕರ್ಯವನ್ನು ಅಳಿಸಿಹಾಕುವ ಸಮಯವಾಗಿದೆ ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ರವಿವಾರ ಹೇಳಿಕೆ ನೀಡಿದ್ದರು.