ಗಾಝಾದಲ್ಲಿ 3 ದಿನ ಮಾನವೀಯ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ
ಜೆರುಸಲೇಂ: ಗಾಝಾ ಪ್ರದೇಶದ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಗಾಝಾದಲ್ಲಿ ಮೂರು ದಿನಗಳ ಮಾನವೀಯ ವಿರಾಮಕ್ಕೆ ಇಸ್ರೇಲ್ ಸಮ್ಮತಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನಾವು ಚರ್ಚಿಸಿದಂತೆ ಹಾಗೂ ಒಪ್ಪಿಗೆ ನೀಡಿದಂತೆ, ಕೇಂದ್ರ ಗಾಝಾದಲ್ಲಿ 3 ದಿನಗಳ ಪೋಲಿಯೊ ಲಸಿಕೆ ಅಭಿಯಾನ ಸೆಪ್ಟಂಬರ್ 1ರಿಂದ ಆರಂಭವಾಗಲಿದೆ. ಲಸಿಕೆ ಅಭಿಯಾನದ ಸಂದರ್ಭ ಮಾನವೀಯ ವಿರಾಮ ಜಾರಿಯಲ್ಲಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಫೆಲೆಸ್ತೀನ್ ಪ್ರಾಂತಗಳ ಪ್ರತಿನಿಧಿ ರಿಕ್ ಪೀಪರ್ಕಾರ್ನ್ ಹೇಳಿದ್ದಾರೆ.
ದಕ್ಷಿಣ ಮತ್ತು ಉತ್ತರ ಗಾಝಾ ಪ್ರದೇಶದಲ್ಲಿ ಪೋಲಿಯೊ ಲಸಿಕೆ ಹಾಕಲಾಗುವುದು ಮತ್ತು ಇವು ಕೂಡಾ ಮಾನವೀಯ ವಿರಾಮದ ವ್ಯಾಪ್ತಿಯಡಿ ಬರಲಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ದಿನವನ್ನೂ ಬಳಸಿಕೊಳ್ಳಲು ಇಸ್ರೇಲ್ ಒಪ್ಪಿದೆ. 10 ವರ್ಷದೊಳಗಿನ 6,40,000ಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಸಂಬಂಧಿತ ಎಲ್ಲಾ ಪಕ್ಷಗಳೂ ತಾವು ನೀಡಿರುವ ವಾಗ್ದಾನಕ್ಕೆ ಬದ್ಧವಾಗಿರುವ ಅಗತ್ಯವಿದೆ. ಪೋಲಿಯೊ ಪ್ರಕರಣ ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಅಂತರಾಷ್ಟ್ರೀಯ ಹರಡುವಿಕೆಯನ್ನು ತಡೆಯಲು ಪ್ರತೀ ಸುತ್ತಿನಲ್ಲೂ ಕನಿಷ್ಟ 90%ದಷ್ಟು ಕವರೇಜ್ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಸಹಾಯಕ ಪ್ರಧಾನ ನಿರ್ದೇಶಕ ಮೈಕಲ್ ರಿಯಾನ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಹೇಳಿದ್ದಾರೆ.
ತಮ್ಮ ಸರಕಾರವು ಗಾಝಾ ಪಟ್ಟಿಯಲ್ಲಿರುವ ಮಕ್ಕಳಿಗೆ ಪೋಲಿಯೊ ವಿರುದ್ಧ ಲಸಿಕೆ ಹಾಕಿಸಲು ವಿಶ್ವ ಆರೋಗ್ಯ ಸಂಘಟನೆ ಹಾಗೂ ಯುನಿಸೆಫ್‍ನೊಂದಿಗೆ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಸಂಘಟಿಸಿದೆ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವೀಯ ಕದನ ವಿರಾಮವನ್ನು ಬೆಂಬಲಿಸುವುದಾಗಿ ಹಮಾಸ್ ಹೇಳಿದೆ. ಪೋಲಿಯೊ ಲಸಿಕೆ ಅಭಿಯಾನವನ್ನು ವಿಳಂಬವಿಲ್ಲದೆ ಕಾರ್ಯಗತಗೊಳಿಸುವುದು ಅತ್ಯಗತ್ಯ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಸಹಾಯಕ ರಾಯಭಾರಿ ರಾಬರ್ಟ್ ವುಡ್ ಹೇಳಿದ್ದು, ಲಸಿಕೆ ಅಭಿಯಾನವನ್ನು ನಡೆಸುವ ಏಜೆನ್ಸಿಗಳಿಗೆ ಪ್ರವೇಶವನ್ನು ಸುಲಭಗೊಳಿಸಲು ಮತ್ತು ಲಸಿಕೆ ಅಭಿಯಾನದ ಸಮಯದಲ್ಲಿ ಶಾಂತತೆಯ ಅವಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಿಲಿಟರಿ ಕಾರ್ಯಾಚರಣೆಯಿಂದ ದೂರ ಇರುವಂತೆ ಇಸ್ರೇಲ್ ಅನ್ನು ಆಗ್ರಹಿಸಿದ್ದಾರೆ.
ಪೋಲಿಯೊ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದು ಹೆಚ್ಚಾಗಿ ಕೊಳಚೆ ಮತ್ತು ಕಲುಷಿತ ನೀರಿನಿಂದ ಹರಡುತ್ತದೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‍ನ ದಾಳಿಯಿಂದ ಗಾಝಾದ ಮೂಲಸೌಕರ್ಯಗಳು ನಾಶಗೊಂಡಿರುವುದರಿಂದ ಅಶುದ್ಧ, ಕಲುಷಿತ ನೀರಿನ ಸಮಸ್ಯೆ ಹೆಚ್ಚಿದೆ. ಈ ರೋಗವು ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪಾಶ್ರ್ವವಾಯುವಿಗೆ ಕಾರಣವಾಗಬಹುದು.
1.2 ದಶಲಕ್ಷ ಪೋಲಿಯೊ ಲಸಿಕೆ ಡೋಸ್:
ಸೆಪ್ಟಂಬರ್ 1ರಿಂದ ಆರಂಭವಾಗುವ ಪೋಲಿಯೊ ಲಸಿಕೆ ಅಭಿಯಾನಕ್ಕೆ ಪೂರಕವಾಗಿ ಗಾಝಾಕ್ಕೆ ಈಗಾಗಲೇ 1 ಕೋಟಿ 26 ಲಕ್ಷ ಪೋಲಿಯೊ ಲಸಿಕೆ ಡೋಸ್‍ಗಳನ್ನು ವಿತರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ರಿಕ್ ಪೀಪರ್ಕಾರ್ನ್ ಹೇಳಿದ್ದಾರೆ.
6,40,000ಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿಯಿದೆ. ಹೆಚ್ಚುವರಿ 4 ಲಕ್ಷ ಡೋಸ್‍ಗಳನ್ನು ಗಾಝಾಕ್ಕೆ ರವಾನಿಸಲಾಗಿದೆ. ಬಾಯಿಯ ಮೂಲಕ 2 ಹನಿ ಲಸಿಕೆಗಳನ್ನು ಹಾಕಲಾಗುತ್ತದೆ. ಲಸಿಕೆಯನ್ನು ಪೂರ್ಣಗೊಳಿಸಲು ಪ್ರತೀ ಮಗುವಿಗೆ ಇನ್ನೂ ಎರಡು ಹನಿಗಳನ್ನು ನೀಡಲು ಆರೋಗ್ಯ ಕಾರ್ಯಕರ್ತರು ಮುಂದಿನ ನಾಲ್ಕು ವಾರಗಳಲ್ಲಿ ಹಿಂದಿರುಗಬೇಕಾಗುತ್ತದೆ. ಆದರೆ ಗಾಝಾ ಹೋರಾಟಕ್ಕೆ ಮತ್ತೊಂದು ಮಾನವೀಯ ವಿರಾಮ ಜಾರಿಯ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ ಎಂದವರು ಹೇಳಿದ್ದಾರೆ.