ರಫಾದಲ್ಲಿ ಇಸ್ರೇಲ್ ದಾಳಿ ಒತ್ತೆಯಾಳು ವಿನಿಮಯಕ್ಕೆ ತಡೆಯಾಗಲಿದೆ: ಹಮಾಸ್ ಎಚ್ಚರಿಕೆ
ಗಾಝಾ : ಗಾಝಾ ಗಡಿಭಾಗದಲ್ಲಿರುವ ರಫಾ ನಗರದಲ್ಲಿ ಇಸ್ರೇಲ್‍ನ ಪದಾತಿ ದಳದ ಆಕ್ರಮಣವು ಒತ್ತೆಯಾಳು ವಿನಿಮಯ ಪ್ರಕ್ರಿಯೆಗೆ ತಡೆಯಾಗಲಿದೆ ಎಂದು ಹಮಾಸ್ ಮುಖಂಡರನ್ನು ಉಲ್ಲೇಖಿಸಿ `ಅಕ್ಸಾ' ಟಿವಿ ವಾಹಿನಿ ರವಿವಾರ ವರದಿ ಮಾಡಿದೆ.
ರಫಾ ನಗರದ ನಿವಾಸಿಗಳನ್ನು ತೆರವುಗೊಳಿಸಿ ಅಲ್ಲಿ ಹಮಾಸ್ ಸ್ಥಾಪಿಸಿರುವ 4 ಬಟಾಲಿಯನ್‍ಗಳನ್ನು ನಾಶಗೊಳಿಸುವಂತೆ ಇಸ್ರೇಲ್ ಸೇನೆಗೆ ಆದೇಶಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಶನಿವಾರ ಹೇಳಿಕೆ ನೀಡಿತ್ತು. ಈ ಹಿಂದೆ ಗಾಝಾದ ನಗರಗಳ ಮೇಲೆ ಆಕ್ರಮಣ ನಡೆಸುವುದಕ್ಕೂ ಮುನ್ನ, ದಕ್ಷಿಣಕ್ಕೆ ಸ್ಥಳಾಂತರಗೊಳ್ಳುವಂತೆ ಅಲ್ಲಿನ ನಾಗರಿಕರಿಗೆ ಇಸ್ರೇಲ್ ಮಿಲಿಟರಿ ಆದೇಶಿಸಿತ್ತು. ಆದರೆ ಈಗ ನಾಗರಿಕರು ಸ್ಥಳಾಂತರಗೊಳ್ಳಲು ಯಾವುದೇ ಸುರಕ್ಷಿತ ಸ್ಥಳ ಉಳಿದಿಲ್ಲದ ಹಿನ್ನೆಲೆಯಲ್ಲಿ ಹಲವು ಜನರು ಸಾವನ್ನಪ್ಪಲಿದ್ದಾರೆ ಎಂದು ವಿಶ್ವಸಂಸ್ಥೆಯ ನೆರವು ಏಜೆನ್ಸಿ ಆತಂಕ ವ್ಯಕ್ತಪಡಿಸಿದೆ.
ಈ ಮಧ್ಯೆ, ರವಿವಾರ ಬೆಳಗ್ಗಿನವರೆಗಿನ ಕಳೆದ 96 ಗಂಟೆಗಳಲ್ಲಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ರೇಲ್‍ನ ಇಬ್ಬರು ಒತ್ತೆಯಾಳುಗಳು ಹತರಾಗಿದ್ದು ಇತರ 8 ಒತ್ತೆಯಾಳುಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಮಾಸ್ ವಕ್ತಾರರನ್ನು ಉಲ್ಲೇಖಿಸಿದ ವರದಿ ಹೇಳಿದೆ.