ದಕ್ಷಿಣ ಬೈರೂತ್ ಮೇಲೆ ಇಸ್ರೇಲ್ ಬಾಂಬ್ ದಾಳಿ
ಬೈರೂತ್ : ಲೆಬನಾನ್ ರಾಜಧಾನಿ ಬೈರೂತ್‍ನಲ್ಲಿ ಹಿಜ್ಬುಲ್ಲಾ ಪ್ರಾಬಲ್ಯವಿರುವ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಸೇನೆ ಗುರುವಾರ ದಕ್ಷಿಣ ಬೈರೂತ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಬೈರುತ್‍ನ ದಕ್ಷಿಣ ಭಾಗದಲ್ಲಿರುವ ಘೊಬೈರಿ ಮತ್ತು ಶೊಯ್ಫತ್ ಅಲ್-ಒಮ್ರುಸಿಯಾ ನಗರಗಳನ್ನು ಗುರಿಯಾಗಿಸಿ ಇಸ್ರೇಲ್ ಪಡೆ ತೀವ್ರ ವೈಮಾನಿಕ ದಾಳಿ ನಡೆಸಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ. ಸಾವು-ನೋವಿನ ಬಗ್ಗೆ ಮಾಹಿತಿ ದೊರೆತಿಲ್ಲ. ದಾಳಿ ನಡೆದ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸಿದೆ. ಗುರುವಾರ ಬಿಂಟ್ ಜಬೆಲಿ ನಗರದ ಮೇಲೆಯೂ ಭೀಕರ ಬಾಂಬ್ ದಾಳಿ ನಡೆದಿದೆ. ದಕ್ಷಿಣ ಬೈರೂತ್‍ನಲ್ಲಿ ಇಸ್ರೇಲ್‍ನ ಪುನರಾವರ್ತಿತ ವೈಮಾನಿಕ ದಾಳಿಯು ನಾಗರಿಕರ ಸಾಮೂಹಿಕ ವಲಸೆಗೆ ಕಾರಣವಾಗಿದೆ ಎಂದು ಲೆಬನಾನ್‍ನ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.