ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಗೆ ಇಸ್ರೇಲ್, ಅಮೆರಿಕದ ಬೆದರಿಕೆಗೆ ಖಂಡನೆ
ಲಂಡನ್: ಇಸ್ರೇಲ್ ಮುಖಂಡರ ಬಂಧನಕ್ಕೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಜಾರಿಗೊಳಿಸಿರುವ ವಾರಂಟನ್ನು ಕಡೆಗಣಿಸುವ ಅಮೆರಿಕ ಮತ್ತು ಇಸ್ರೇಲ್‍ನ ಪ್ರಯತ್ನಗಳನ್ನು ಐಸಿಸಿ ಸದಸ್ಯ ರಾಷ್ಟ್ರಗಳು ವಿರೋಧಿಸಬೇಕು ಎಂದು ಮಾನವ ಹಕ್ಕುಗಳ ಮೇಲ್ವಿಚಾರಣಾ ಎಜೆನ್ಸಿ(ಎಚ್‍ಆರ್‍ಡಬ್ಲ್ಯೂ) ಸೋಮವಾರ ಆಗ್ರಹಿಸಿದೆ.
ತಾನು ಜಾರಿಗೊಳಿಸುವ ಆದೇಶಗಳ ಪಾಲನೆಯಾಗಲು ಸದಸ್ಯ ದೇಶಗಳಿಂದ ರಾಜಕೀಯ ಬೆಂಬಲ, ಸಂಪನ್ಮೂಲ ಮತ್ತು ಸಹಕಾರವನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಶಿಫಾರಸುಗಳನ್ನು ಒಳಗೊಂಡ 24 ಪುಟಗಳ ವರದಿಯನ್ನು ಎಚ್‍ಆರ್‍ಡಬ್ಲ್ಯೂ ಬಿಡುಗಡೆಗೊಳಿಸಿದೆ.
ನವೆಂಬರ್ 21ರಂದು ವಾರಾಂಟ್ ಜಾರಿಗೊಳಿಸಿದಂದಿನಿಂದ ವಿಶ್ವದ ಅಗ್ರಗಣ್ಯ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರೀ ಒತ್ತಡ ಎದುರಾಗಿದೆ ಎಂದು ಎಚ್‍ಆರ್‍ಡಬ್ಲ್ಯೂ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮಾಜಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಮತ್ತು ಹಮಾಸ್ ಕಮಾಂಡರ್ ಮುಹಮ್ಮದ್ ದೆಯಿಫ್ ವಿರುದ್ಧ ಐಸಿಸಿ ಬಂಧನ ವಾರಾಂಟ್ ಜಾರಿಗೊಳಿಸಿದೆ. ವಾರಾಂಟ್ ಜಾರಿಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ಸಂಸದರು ಐಸಿಸಿ ಮತ್ತು ಅದರ ಸಿಬ್ಬಂದಿಗಳ ವಿರುದ್ಧ ನಿರ್ಬಂಧ ಜಾರಿಗೊಳಿಸುವ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ. ಐಸಿಸಿ ವಿರುದ್ಧದ ಅಮೆರಿಕದ ನಿರ್ಬಂಧಗಳು ಜಾಗತಿಕ ನ್ಯಾಯ ವ್ಯವಸ್ಥೆಯ ಮೇಲೆ ವ್ಯಾಪಕ ಪರಿಣಾಮಕ್ಕೆ ಕಾರಣವಾಗಲಿದೆ. ನಿರ್ಬಂಧಗಳು ಕಾನೂನಿನ ಅನಿಶ್ಚಿತತೆ ಮತ್ತು ಎನ್‍ಜಿಒಗಳ, ನ್ಯಾಯವಾದಿಗಳ, ಕಾನೂನು ಸಲಹೆಗಾರರ ಬಂಧನಕ್ಕೆ ಕಾರಣವಾಗಲಿದೆ. ನಿರ್ಬಂಧಗಳನ್ನು ಅತ್ಯಂತ ಗಂಭೀರ ಅಪರಾಧ ಎಸಗುವವರ ವಿರುದ್ಧ ಜಾರಿಗೊಳಿಸಬೇಕು, ನ್ಯಾಯ ಸ್ಥಾಪನೆಗೆ ಕೆಲಸ ಮಾಡುವವರ ವಿರುದ್ಧ ಅಲ್ಲ' ಎಂದು ಎಚ್‍ಆರ್‍ಡಬ್ಲ್ಯೂ ಎಚ್ಚರಿಸಿದೆ.
`ಐಸಿಸಿಯ ವಾರಂಟ್‍ಗಳು ಯಾರೊಬ್ಬರೂ ಕಾನೂನಿಗಿಂತ ಮಿಗಿಲಲ್ಲ ಎಂಬ ಸೂಕ್ಷ್ಮ ಸಂದೇಶವನ್ನು ರವಾನಿಸುತ್ತವೆ. ನ್ಯಾಯಕ್ಕಾಗಿ ಐಸಿಸಿಯ ಮಹತ್ವದ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಾತರಿ ಪಡಿಸುವ ಅಗತ್ಯದ ಕ್ರಮಗಳನ್ನು ಡಿಸೆಂಬರ್ 2ರಿಂದ 7ರವರೆಗೆ ನಡೆಯುವ ವಾರ್ಷಿಕ ಸಭೆಯಲ್ಲಿ ಐಸಿಸಿ ಸದಸ್ಯರು ಕೈಗೊಳ್ಳಬೇಕು' ಎಂದು ಮಾನವ ಹಕ್ಕು ಮೇಲ್ವಿಚಾರಣಾ ಏಜೆನ್ಸಿಯ ಅಂತರಾಷ್ಟ್ರೀಯ ನ್ಯಾಯ ನಿರ್ದೇಶಕಿ ಲಿಝ್ ಎವೆನ್ಸನ್ ಹೇಳಿದ್ದಾರೆ.
ವಾರಾಂಟ್ ಜಾರಿಗೊಳಿಸಿದ ಬಳಿಕ ಐಸಿಸಿಯ ಹಲವು ಸದಸ್ಯ ರಾಷ್ಟ್ರಗಳು ನ್ಯಾಯಾಲಯದ ನಿರ್ಧಾರವನ್ನು ಬೆಂಬಲಿಸಿ ಧ್ವನಿ ಎತ್ತಿದರೂ, ಕೆಲವರು ವಾರಂಟ್ ಜಾರಿಗೊಳಿಸುವಲ್ಲಿ ತಮ್ಮ ಸ್ಪಷ್ಟ ಬದ್ಧತೆಯನ್ನು ಸ್ಪಷ್ಟಪಡಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಹಂಗರಿ ದೇಶ ಐಸಿಸಿಯ ಸದಸ್ಯನಾಗಿರುವ ಹೊರತಾಗಿಯೂ, ತನ್ನ ದೇಶಕ್ಕೆ ಭೇಟಿ ನೀಡಲು ಇಸ್ರೇಲ್ ಪ್ರಧಾನಿಯನ್ನು ಆಹ್ವಾನಿಸುವುದಾಗಿ ಹಂಗರಿ ಅಧ್ಯಕ್ಷ ವಿಕ್ಟರ್ ಒರ್ಬಾನ್ ಹೇಳಿದ್ದಾರೆ. ಇಸ್ರೇಲ್ ಐಸಿಸಿಯ ಸದಸ್ಯನಾಗಿಲ್ಲದ ಕಾರಣ ನೆತನ್ಯಾಹು ಬಂಧನದಿಂದ ವಿನಾಯಿತಿ ಪಡೆದಿದ್ದಾರೆ ಎಂದು ಫ್ರಾನ್ಸ್ ಸರಕಾರ ಕಳೆದ ವಾರ ಹೇಳಿಕೆ ನೀಡಿತ್ತು. ಆದರೆ ಐಸಿಸಿಯ ನ್ಯಾಯಾಧೀಶರು ಈ ಪ್ರತಿಪಾದನೆಯನ್ನು ತಳ್ಳಿಹಾಕಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯ ಮತ್ತು ಅದನ್ನು ಬೆಂಬಲಿಸುವವರ ವಿರುದ್ಧ, ನಾಗರಿಕ ಸಮಾಜ ಸಂಸ್ಥೆಗಳು, ಎನ್‍ಜಿಒ(ಸರ್ಕಾರೇತರ ಸಂಸ್ಥೆಗಳು), ಮಾನವ ಹಕ್ಕುಗಳ ಸಮರ್ಥಕರ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಬೆದರಿಕೆ ಒಡ್ಡುತ್ತಿರುವುದನ್ನು ಸದಸ್ಯ ರಾಷ್ಟ್ರಗಳು ಖಂಡಿಸಬೇಕು. ವಾರ್ಷಿಕ ಮಹಾಸಭೆಯು ನ್ಯಾಯಾಲಯವನ್ನು ಬಲವಂತದ ಕ್ರಮಗಳಿಂದ ರಕ್ಷಿಸುವ ಗುರಿ ಹೊಂದಿರುವ ಸಶಕ್ತ ಕ್ರಮಗಳನ್ನು ರೂಪಿಸಬೇಕು. ಅತ್ಯಂತ ಗಂಭೀರ ಅಪರಾಧಗಳಲ್ಲಿ ನ್ಯಾಯ ಒದಗಿಸುವ ಜಾಗತಿಕ ಸಂಸ್ಥೆಯೆಂಬ ಮಹಾತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಲು ಐಸಿಸಿಗೆ ಸದಸ್ಯ ರಾಷ್ಟ್ರಗಳ ಬೆಂಬಲದ ಅಗತ್ಯವಿದೆ. ಎರಡು ಮಾನಂಡಗಳನ್ನು ತಪ್ಪಿಸಲು ಮತ್ತು ಬಲಿಪಶುಗಳು ಹಾಗೂ ಪೀಡಿತ ಸಮುದಾಯಗಳಿಗೆ ನ್ಯಾಯಾಲಯದ ನ್ಯಾಯಸಮ್ಮತೆಯನ್ನು ಎತ್ತಿಹಿಡಿಯಲು ಸದಸ್ಯ ರಾಷ್ಟ್ರಗಳ ಬೆಂಬಲವು ಸ್ಥಿರವಾಗಿರಬೇಕು' ಎಂದು ಎವೆನ್ಸನ್ ಆಗ್ರಹಿಸಿದ್ದಾರೆ.
ತನಿಖೆಯಲ್ಲಿ ಅಮೆರಿಕ, ರಶ್ಯದ ಹಸ್ತಕ್ಷೇಪ : ಐಸಿಸಿ ಮುಖ್ಯಸ್ಥೆ ವಿರೋಧ
ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದ ತನಿಖೆಯಲ್ಲಿ ಅಮೆರಿಕ ಮತ್ತು ರಶ್ಯ ಮಧ್ಯಪ್ರವೇಶಿಸುತ್ತಿವೆ. ನ್ಯಾಯಾಲಯದ ವಿರುದ್ಧದ ಬೆದರಿಕೆ ಅಥವಾ ದಾಳಿಯ ಕ್ರಮಗಳು ಆಘಾತಕಾರಿ ಎಂದು ಐಸಿಸಿ ಮುಖ್ಯಸ್ಥೆ ಟೊಮೊಕೊ ಅಕಾನೆ ಹೇಳಿದ್ದಾರೆ.
ಸೋಮವಾರ ಆರಂಭಗೊಂಡ ಐಸಿಸಿಯ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ` ಇದು ಭಯೋತ್ಪಾದಕ ಸಂಘಟನೆ ಎಂಬ ರೀತಿಯಲ್ಲಿ ಐಸಿಸಿಯ ವಿರುದ್ಧ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವೊಂದು ಕಠಿಣ ಆರ್ಥಿಕ ನಿರ್ಬಂಧಗಳ ಬೆದರಿಕೆ ಒಡ್ಡಿದೆ. ಐಸಿಸಿಯ ಹಲವು ಚುನಾಯಿತ ಅಧಿಕಾರಿಗಳ ವಿರುದ್ಧ ಭದ್ರತಾ ಮಂಡಳಿಯ ಮತ್ತೊಂದು ಖಾಯಂ ಸದಸ್ಯ ರಾಷ್ಟ್ರವು ಬಂಧನ ವಾರಂಟ್ ಹೊರಡಿಸಿದೆ' ಎಂದರು.
ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ತನಿಖೆ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಐಸಿಸಿಯ ಅಧಿಕಾರಿ ಕರೀಂ ಖಾನ್ ಹಾಗೂ ಇತರರ ವಿರುದ್ಧ ರಶ್ಯ ವಾರಂಟ್ ಜಾರಿಗೊಳಿಸಿದೆ.
`ಐಸಿಸಿಯ ಬಂಧನ ವಾರಂಟ್ ಅಪಾಯಕಾರಿ ಜೋಕ್' ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಸೆನೆಟರ್ ಲಿಂಡ್ಸೆ ಗ್ರಹಾಮ್ ಕಳೆದ ವಾರ ಟೀಕಿಸಿದ್ದರು ಮತ್ತು ಐಸಿಸಿ ಪ್ರಾಸಿಕ್ಯೂಟರ್ ವಿರುದ್ಧ ನಿರ್ಬಂಧ ಜಾರಿಗೆ ಆಗ್ರಹಿಸಿದ್ದರು. ಕೆನಡಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಅಥವಾ ಯಾವುದೇ ಮಿತ್ರದೇಶಗಳು ಐಸಿಸಿಗೆ ನೆರವಾಗಲು ಪ್ರಯತ್ನಿಸಿದರೆ ಅವುಗಳ ವಿರುದ್ಧವೂ ನಿರ್ಬಂಧ ಜಾರಿಗೊಳ್ಳಲಿದೆ ಎಂದು ಗ್ರಹಾಮ್ ಎಚ್ಚರಿಕೆ ನೀಡಿದ್ದರು.