ಸಿರಿಯಾ ಬಫರ್ ವಲಯದಲ್ಲಿ ಸೇನೆ ನಿಯೋಜಿಸಿದ ಇಸ್ರೇಲ್

Update: 2024-12-08 16:20 GMT

PC : PTI

ಜೆರುಸಲೇಂ: ಸಿರಿಯಾ ರಾಜಧಾನಿ ದಮಾಸ್ಕಸ್ ಬಂಡುಕೋರ ಪಡೆಗಳ ವಶವಾದ ಬಳಿಕ ನೈಋತ್ಯ ಸಿರಿಯಾದಲ್ಲಿ ಇಸ್ರೇಲ್ ಸ್ವಾಧೀನದಲ್ಲಿರುವ ಗೋಲನ್ ಹೈಟ್ಸ್ ನ ಪಕ್ಕದ `ಮಿಲಿಟರಿ ರಹಿತ ಬಫರ್ ವಲಯ'ಕ್ಕೆ ಪಡೆಗಳನ್ನು ನಿಯೋಜಿಸಿರುವುದಾಗಿ ಇಸ್ರೇಲ್ ಮಿಲಿಟರಿ ರವಿವಾರ ಹೇಳಿದೆ.

ಬಂಡುಕೋರ ಪಡೆ ಸಿರಿಯಾದ್ಯಂತ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿಪಾಲನಾ ಪಡೆಗೆ ನೆರವಾಗಲು ತನ್ನ ಪಡೆಗಳು ವಿಶ್ವಸಂಸ್ಥೆ ಪಡೆ ಗಸ್ತು ತಿರುಗುತ್ತಿರುವ ಬಫರ್ ವಲಯ ಪ್ರವೇಶಿಸಿವೆ ಎಂದು ಇಸ್ರೇಲ್ ಶನಿವಾರ ಹೇಳಿತ್ತು. ಸಶಸ್ತ್ರ ಹೋರಾಟಗಾರರು ಬಫರ್ ವಲಯ ಪ್ರವೇಶಿಸುವುದನ್ನು ತಡೆಯಲು ಸೇನೆಯನ್ನು ನಿಯೋಜಿಸಿರುವುದಾಗಿ ರವಿವಾರ ಘೋಷಿಸಿದೆ. ಸಿರಿಯಾದಲ್ಲಿ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ , ಭದ್ರತೆಗಾಗಿ ಹಾಗೂ ಗೋಲನ್ ಹೈಟ್ಸ್ ನ ಸಮುದಾಯ, ಇಸ್ರೇಲ್‍ನ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೇನೆಯ ಪಡೆಗಳನ್ನು ಬಫರ್ ವಲಯ ಹಾಗೂ ಇತರ ಕಡೆಗಳಲ್ಲಿ ನಿಯೋಜಿಸಲಾಗಿದೆ. ಬಫರ್ ವಲಯವನ್ನು ಸಂರಕ್ಷಿಸಲು ಮತ್ತು ಇಸ್ರೇಲ್ ಅನ್ನು ರಕ್ಷಿಸಲು ಅಗತ್ಯವಿರುವವರೆಗೆ ಇಸ್ರೇಲಿ ಪಡೆಗಳು ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ಮಿಲಿಟರಿಯ ಹೇಳಿಕೆ ತಿಳಿಸಿದೆ. ಸಿರಿಯಾದ ಆಂತರಿಕ ಘಟನೆಗಳಲ್ಲಿ ಇಸ್ರೇಲಿ ಮಿಲಿಟರಿ ಮಧ್ಯಪ್ರವೇಶಿಸುವುದಿಲ್ಲ ಎಂದು ಇಸ್ರೇಲ್ ಒತ್ತಿ ಹೇಳಿದೆ.

ನವೆಂಬರ್ 27ರಂದು ಸಶಸ್ತ್ರ ಹೋರಾಟಗಾರರ ಗುಂಪು (ಹಯಾತ್ ತಹ್ರೀರ್ ಅಲ್-ಶಾಮ್) ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಪಡೆಗಳ ವಿರುದ್ಧ ಸಂಘರ್ಷ ಆರಂಭಿಸಿದ ಬಳಿಕ ಇಸ್ರೇಲ್ ಸ್ವಾಧೀನದಲ್ಲಿರುವ ಗೋಲನ್ ಪ್ರದೇಶದ ಬಳಿಯ ಕ್ಯುನೈತ್ರಾ ಪ್ರಾಂತದಿಂದ ಸರಕಾರಿ ಪಡೆಗಳು ಹಿಂದೆ ಸರಿದಿದ್ದವು. ಗೋಲನ್ ಹೈಟ್ಸ್‍ನ ಹೆಚ್ಚಿನ ಪ್ರದೇಶವನ್ನು 1967ರಿಂದ ಇಸ್ರೇಲ್ ಸ್ವಾಧೀನಕ್ಕೆ ಪಡೆದಿದ್ದು ಈ ಕ್ರಮವನ್ನು ಹೆಚ್ಚಿನ ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿಲ್ಲ. 1974ರಲ್ಲಿ ಗೋಲನ್ ಹೈಟ್ಸ್‍ನ ಇಸ್ರೇಲ್ ಸ್ವಾಧೀನದ ಪ್ರದೇಶವನ್ನು ಸಿರಿಯಾ ಸ್ವಾಧೀನದ ಪ್ರದೇಶದಿಂದ ಪ್ರತ್ಯೇಕಿಸುವ ಬಫರ್ ವಲಯವನ್ನು ಗುರುತಿಸಿ ಅಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯನ್ನು ನಿಯೋಜಿಸಲಾಗಿದೆ.

ಬಫರ್ ವಲಯದಲ್ಲಿ ಸುಮಾರು 20 ಗುರುತಿಸಲಾಗದ ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಗಮನಿಸಲಾಗಿದೆ. ಇವರು ಬಫರ್ ವಲಯದ ಉತ್ತರದಲ್ಲಿ ಶಾಂತಿಪಾಲನಾ ತಂಡದ ನೆಲೆಯನ್ನು ತಲುಪಿದ್ದಾರೆ. ಶಾಂತಿಪಾಲಕರು ಗೋಲನ್‍ನಲ್ಲಿ ತಮಗೆ ವಹಿಸಿರುವ ಜವಾಬ್ದಾರಿಯ ನಿರ್ವಹಣೆಯನ್ನು ಮುಂದುವರಿಸಲಿದ್ದಾರೆ ಎಂದು ವಿಶ್ವಸಂಸ್ಥೆ ಶಾಂತಿಪಾಲನಾ ತಂಡ(ಯುಎನ್‍ಡಿಒಎಫ್)ನ ವಕ್ತಾರರು ಹೇಳಿದ್ದಾರೆ. ಬಂಡುಕೋರರ ಸಂಭಾವ್ಯ ದಾಳಿಗಳನ್ನು ಹಿಮ್ಮೆಟ್ಟಿಸಲು ತನ್ನ ಸೇನೆ ಶಾಂತಿಪಾಲನಾ ಪಡೆಗೆ ನೆರವಾಗುತ್ತಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಈ ಮಧ್ಯೆ, ಕ್ಯುನೈತ್ರಾ ಪ್ರಾಂತದಲ್ಲಿ ಶಸ್ತ್ರಾಸ್ತ್ರ ಡಿಪೋವನ್ನು ಹಾಗೂ ದಮಾಸ್ಕಸ್ ಬಳಿ ವಾಯುರಕ್ಷಣಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಗೋಲಾನ್ ಹೈಟ್ಸ್ ಪ್ರದೇಶದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು ಆನ್‍ಲೈನ್ ತರಗತಿ ನಡೆಸಲು ಸೂಚಿಸಲಾಗಿದೆ. ಈ ಪ್ರದೇಶದ ಕೃಷಿ ಭೂಮಿಗಳನ್ನು `ಮುಚ್ಚಿದ ಮಿಲಿಟರಿ ವಲಯ'ವೆಂದು ಘೋಷಿಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News