ರಫಾ ಕಾರ್ಯಾಚರಣೆಗೂ ಮುನ್ನ ಒತ್ತೆಯಾಳು ಒಪ್ಪಂದಕ್ಕೆ ಅಂತಿಮ ಅವಕಾಶ : ಇಸ್ರೇಲ್

Update: 2024-04-27 15:44 GMT

 ಬೆಂಜಮಿನ್ ನೆತನ್ಯಾಹು | PC : PTI

ಟೆಲ್ ಅವೀವ್: ಗಾಝಾ ಪಟ್ಟಿಯ ರಫಾ ನಗರದ ಮೇಲೆ ದೀರ್ಘ ಯೋಜಿತ ಪದಾತಿ ದಳದ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಕದನ ವಿರಾಮ ಮಾತುಕತೆ ಹಾಗೂ ಒತ್ತೆಯಾಳು ಬಿಡುಗಡೆಯ ಕುರಿತ ಒಪ್ಪಂದಕ್ಕೆ ಬರಲು ಅಂತಿಮ ಅವಕಾಶವನ್ನು ನೀಡುತ್ತಿದ್ದೇವೆ ಎಂದು ಇಸ್ರೇಲ್ ಈಜಿಪ್ಟ್ ಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದೆ.

ಒತ್ತೆಯಾಳು ಒಪ್ಪಂದವನ್ನು ಮುಂದಿಟ್ಟುಕೊಂಡು ಹಮಾಸ್, ವಿಶೇಷವಾಗಿ ಗಾಝಾದಲ್ಲಿ ಅದರ ಮುಖಂಡ ಯಾಹ್ಯಾ ಸಿನ್ವರ್ ವಿಳಂಬ ತಂತ್ರ ಅನುಸರಿಸುವುದಕ್ಕೂ ನಮ್ಮ ಒಪ್ಪಿಗೆಯಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇಸ್ರೇಲ್‍ನ ಕದನ ವಿರಾಮ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರತಿಕ್ರಿಯಿಸುವುದಾಗಿ ಹಮಾಸ್ ಶನಿವಾರ ಹೇಳಿದೆ. ` ಎಪ್ರಿಲ್ 13ರಂದು ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆದಾರರಿಗೆ ಸಲ್ಲಿಸಿರುವ ಪ್ರಸ್ತಾವನೆಗೆ ಯಹೂದಿ ಆಕ್ರಮಣಕಾರರು ನೀಡಿರುವ ಅಧಿಕೃತ ಪ್ರತಿಕ್ರಿಯೆ ಇಂದು(ಎಪ್ರಿಲ್ 27) ನಮ್ಮ ಕೈಸೇರಿದೆ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ನಮ್ಮ ಪ್ರತಿಕ್ರಿಯೆ ನೀಡಲಿದ್ದೇವೆ' ಎಂದು ಹಮಾಸ್‍ನ ಗಾಝಾ ವಿಭಾಗದ ಸಹಾಯಕ ಮುಖ್ಯಸ್ಥ ಖಲೀಲ್ ಅಲ್-ಹಯಾ ಹೇಳಿದ್ದಾರೆ.

ರಫಾದ ಮೇಲೆ ಇಸ್ರೇಲ್‍ನ ನಿರೀಕ್ಷಿತ ಆಕ್ರಮಣ ಮತ್ತು ಹಮಾಸ್-ಇಸ್ರೇಲ್ ನಡುವೆ ಒತ್ತೆಯಾಳು ಒಪ್ಪಂದಕ್ಕೆ ಪ್ರಯತ್ನಿಸುವ ಸಲುವಾಗಿ ಇಸ್ರೇಲ್‍ನ ಉನ್ನತ ಅಧಿಕಾರಿಗಳು ಹಾಗೂ ಈಜಿಪ್ಟ್ ನ ಉನ್ನತ ಮಟ್ಟದ ನಿಯೋಗದ ನಡುವೆ ನಡೆಯುತ್ತಿದ್ದ ಮಾತುಕತೆ ಶುಕ್ರವಾರ ಅಂತ್ಯಗೊಂಡ ಬಳಿಕ ಇಸ್ರೇಲ್ ಈ ಎಚ್ಚರಿಕೆ ಸಂದೇಶ ರವಾನಿಸಿದೆ.

`ಮಾತುಕತೆ ಉತ್ತಮವಾಗಿತ್ತು, ಕೇಂದ್ರೀಕೃತವಾಗಿತ್ತು ಮತ್ತು ಉತ್ತಮ ಪ್ರಬುದ್ಧತೆಯಿಂದ ಕೂಡಿತ್ತು. ಒಪ್ಪಂದದ ಬಗ್ಗೆ ಹಮಾಸ್ ಮೇಲೆ ಒತ್ತಡ ಹೇರಲು ಈಜಿಪ್ಟ್ ಸಿದ್ಧವಿದೆ. ಇದೇ ಸಂದರ್ಭ, ಒಪ್ಪಂದ ಸಾಧ್ಯವಾಗದಿದ್ದರೆ ರಫಾ ಕಾರ್ಯಾಚರಣೆ ಗೆ ಚಾಲನೆ ನೀಡಲು ಇಸ್ರೇಲ್ ಸನ್ನದ್ಧವಾಗಿದೆ' ಎಂದು ಇಸ್ರೇಲ್ ಮೂಲಗಳನ್ನು ಉಲ್ಲೇಖಿಸಿ `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.

ಒತ್ತೆಯಾಳು ಒಪ್ಪಂದದ ಬಗ್ಗೆ ಹಮಾಸ್, ವಿಶೇಷವಾಗಿ ಗಾಝಾದಲ್ಲಿ ಅದರ ಮುಖಂಡ ಯಾಹ್ಯಾ ಸಿನ್ವರ್ ವಿಳಂಬ ತಂತ್ರ ಅನುಸರಿಸುವುದನ್ನು ಇಸ್ರೇಲ್ ಒಪ್ಪುವುದಿಲ್ಲ. ರಫಾ ಕಾರ್ಯಾಚರಣೆಗೂ ಮುನ್ನ ಇದು ಅಂತಿಮ ಅವಕಾಶವಾಗಿದೆ. ಒಪ್ಪಂದ ಅಥವಾ ರಫಾ ಕಾರ್ಯಾಚರಣೆ. ಆಯ್ಕೆ ಅವರ (ಹಮಾಸ್) ಎದುರಿಗಿದೆ' ಎಂದು ಇಸ್ರೇಲ್ ಅಧಿಕಾರಿ ಹೇಳಿದ್ದಾರೆ.

ಗಾಝಾ ಬಿಕ್ಕಟ್ಟನ್ನು ಅಂತ್ಯಗೊಳಿಸುವ , ಹಮಾಸ್‍ನ ಒತ್ತೆಸೆರೆಯಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಕುರಿತು ಸಂಧಾನ ಮಾತುಕತೆಯನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ಈಜಿಪ್ಟ್ ನ ನಿಯೋಗ ಶುಕ್ರವಾರ ಇಸ್ರೇಲ್‍ಗೆ ಭೇಟಿ ನೀಡಿ ಚರ್ಚೆ ನಡೆಸಿದೆ. ಇನ್ನೂ 129 ಒತ್ತೆಯಾಳುಗಳು ಹಮಾಸ್‍ನ ವಶದಲ್ಲಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಯುದ್ಧ ಅಂತ್ಯಗೊಳ್ಳುವ ಮತ್ತು ಉಳಿದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ನಡೆದ ಮಾತುಕತೆ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಹೇಳಿದ್ದಾರೆ.

ಗಾಝಾದಿಂದ ಇಸ್ರೇಲ್ ಸೇನೆ ವಾಪಾಸಾತಿಗೆ ಹಮಾಸ್ ಪಟ್ಟು

ಬಿಕ್ಕಟ್ಟು ಅಂತ್ಯಕ್ಕೆ ಮಾರ್ಗವಾಗಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಅಮೆರಿಕ ಹಾಗೂ ಇತರ 17 ದೇಶಗಳು ಹಮಾಸ್ ಅನ್ನು ಒತ್ತಾಯಿಸಿವೆ. ಆದರೆ ಅಂತರಾಷ್ಟ್ರೀಯ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಹಮಾಸ್ ಪ್ರತಿಕ್ರಿಯಿಸಿದೆ. ಶುಕ್ರವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ `ನಮ್ಮ ಜನರ ಹಕ್ಕುಗಳು ಮತ್ತು ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳುವ ಯಾವುದೇ ಆಲೋಚನೆಗಳು ಅಥವಾ ಪ್ರಸ್ತಾವನೆಗಳಿಗೆ ತಾನು ಮುಕ್ತನಾಗಿರುವುದಾಗಿ' ಹಮಾಸ್ ಹೇಳಿದೆ.

ಆದರೆ, ಗಾಝಾದಲ್ಲಿ ಶಾಶ್ವತ ಕದನ ವಿರಾಮ ಮತ್ತು ಅಲ್ಲಿಂದ ಇಸ್ರೇಲ್‍ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಹಮಾಸ್ ಪಟ್ಟುಹಿಡಿದಿದ್ದು ಇದನ್ನು ಇಸ್ರೇಲ್ ಮತ್ತು ಅಮೆರಿಕದ ಜಂಟಿ ಹೇಳಿಕೆ ತಿರಸ್ಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News