ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ತೊಡಕಾಗಿರುವ ಗಡಿ ಕಾರಿಡಾರ್ ನಿಯಂತ್ರಣ ವಿವಾದ

Update: 2024-08-23 16:18 GMT

Photo: PTI

ಗಾಝಾ ಪಟ್ಟಿ: ಈಜಿಪ್ಟ್ ನೊಂದಿಗೆ ಗಾಝಾ ಪಟ್ಟಿಯ ಗಡಿಯುದ್ದಕ್ಕೂ ಇರುವ ಕಿರಿದಾದ ಭೂಪ್ರದೇಶ ಈಗ ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಒಪ್ಪಂದಕ್ಕೆ ಪ್ರಮುಖ ತೊಡಕಾಗಿದೆ. ಪಿಲಡೆಲ್ಫಿ ಅಥವಾ ಸಲಾಹದ್ದೀನ್ ಕಾರಿಡಾರ್ ನ ಮೇಲೆ ಇಸ್ರೇಲ್ ಶಾಶ್ವತ ನಿಯಂತ್ರಣ ಪಡೆದಿರಬೇಕು ಎಂಬುದು ಪ್ರಧಾನಿ ನೆತನ್ಯಾಹು ಬಯಕೆಯಾಗಿದೆ.

ಈ ಕಾರಿಡಾರ್ ಅನ್ನು ಗಾಝಾ ಯುದ್ಧದ ಸಂದರ್ಭ ಇಸ್ರೇಲ್ ವಶಕ್ಕೆ ಪಡೆದಿದೆ. ಮುಳ್ಳುತಂತಿಯ ಬೇಲಿಯನ್ನು ಹೊಂದಿರುವ ಗಸ್ತು ರಸ್ತೆಯು ಗಡಿಯುದ್ದಕ್ಕೂ 14 ಕಿ.ಮೀ ವರೆಗೆ ಸಾಗುತ್ತದೆ ಮತ್ತು ಅದರ ಕಿರಿದಾದ ಸ್ಥಳದಲ್ಲಿ ಸುಮಾರು 330 ಅಡಿ ಅಗಲವಿದೆ. ಅದರ ಅಡಿಯಲ್ಲಿ ಸುರಂಗಗಳನ್ನು ಅಗೆದಿದ್ದು ಕಳ್ಳಸಾಗಣೆಗೆ ಬಳಸಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 1967 ಮತ್ತು 2005ರ ನಡುವೆ ಗಾಝಾ ತನ್ನ ನೇರ ಆಕ್ರಮಣದಲ್ಲಿದ್ದಾಗ ಇಸ್ರೇಲ್ ಮಿಲಿಟರಿ ಈ ಕಾರಿಡಾರ್ ಅನ್ನು ನಿರ್ಮಿಸಿತ್ತು. ಸಂಭಾವ್ಯ ಗಾಝಾ ಕದನ ವಿರಾಮ ಒಪ್ಪಂದಕ್ಕಾಗಿ ಈಜಿಪ್ಟ್ ನ ಕೈರೋದಲ್ಲಿ ನಡೆದ ಮಾತುಕತೆ ಸಂದರ್ಭ ಫಿಲಿಡೆಲ್ಫಿ ಕಾರಿಡಾರ್ ನಿಯಂತ್ರಣದ ಬಗ್ಗೆ ಇಸ್ರೇಲ್ ಪಟ್ಟುಹಿಡಿದಿದೆ. `ಹಮಾಸ್ ಮತ್ತೆ ಶಸ್ತ್ರಾಸ್ತ್ರ ಪಡೆಯುವುದನ್ನು ತಡೆಯಲು ಈ ಕಾರಿಡಾರ್ ನ ನಿಯಂತ್ರಣ ಅತ್ಯಗತ್ಯ' ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಪಾದಿಸಿದ್ದಾರೆ. ಗಾಝಾದಿಂದ ಇಸ್ರೇಲ್ ಪಡೆ ಸಂಪೂರ್ಣವಾಗಿ ವಾಪಸಾಗಬೇಕು ಎಂದು ಹಮಾಸ್ ಆಗ್ರಹಿಸಿದೆ.

ಈಜಿಪ್ಟ್ ಕೂಡಾ ಇದೇ ನಿಲುವನ್ನು ಹೊಂದಿದೆ. ಫಿಲಡೆಲ್ಫಿ ಕಾರಿಡಾರ್ ನಿಂದ ಮತ್ತು ಫೆಲೆಸ್ತೀನ್‍ನ ರಫಾ ಟರ್ಮಿನಲ್‍ನಿಂದ ಇಸ್ರೇಲ್ ಪಡೆಯನ್ನು ಸಂಪೂರ್ಣವಾಗಿ ವಾಪಾಸು ಪಡೆಯಬೇಕು ಎಂದು ಈಜಿಪ್ಟ್ ಆಗ್ರಹಿಸಿದೆ. 2005ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ನಡೆದ ಒಪ್ಪಂದದಂತೆ ಈ ಕಾರಿಡಾರ್ ಅನ್ನು ಬಫರ್ (ತಟಸ್ಥ) ವಲಯವೆಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News