ಇಸ್ರೇಲ್-ಹಮಾಸ್ ಯುದ್ಧ | ಇತ್ತೀಚಿನ ಯಾವುದೇ ಸಂಘರ್ಷಕ್ಕಿಂತ ಗಾಝಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಅಪಾಯ : ವಿಶ್ವಸಂಸ್ಥೆ ವರದಿ

Update: 2024-10-19 12:55 GMT

PC : thehindu.com

ಹೊಸದಿಲ್ಲಿ : ಯುದ್ಧಗ್ರಸ್ತ ಪ್ರದೇಶಗಳಲ್ಲಿ ಪತ್ರಕರ್ತರನ್ನು ಮತ್ತು ಹಲವಾರು ದೇಶಗಳಲ್ಲಿ ಫೆಲೆಸ್ತೀನ್ ಬೆಂಬಲಿಗರನ್ನು ಗುರಿಯಾಗಿಸಿಕೊಳ್ಳಲಾಗಿದ್ದು, ಇತ್ತೀಚಿನ ಯಾವುದೇ ಸಂಘರ್ಷಕ್ಕಿಂತ ಗಾಝಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಗಂಭೀರ ಅಪಾಯವಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಐರೀನ್ ಖಾನ್ ಅವರು ಶುಕ್ರವಾರ ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕುಗಳ ಕುರಿತು ವಿಶ್ವಸಂಸ್ಥೆಯ ಸ್ವತಂತ್ರ ತನಿಖಾಧಿಕಾರಿಯಾಗಿರುವ ಖಾನ್, ಗಾಝಾದಲ್ಲಿ ಮಾಧ್ಯಮಗಳ ಮೇಲಿನ ದಾಳಿ, ಉದ್ದೇಶಿತ ಹತ್ಯೆಗಳು ಮತ್ತು ಡಝನ್‌ಗಟ್ಟಲೆ ಪತ್ರಕರ್ತರ ನಿರಂಕುಶ ಬಂಧನಗಳನ್ನು ವರದಿಯಲ್ಲಿ ಬೆಟ್ಟು ಮಾಡಿದ್ದಾರೆ.

ಅಲ್ ಜಝೀರಾವನ್ನು ನಿಷೇಧಿಸಿರುವುದು, ಇಸ್ರೇಲ್‌ನೊಳಗೆ ಮತ್ತು ಆಕ್ರಮಿತ ಪ್ರದೇಶಗಳಲ್ಲಿ ಸೆನ್ಸಾರ್‌ಶಿಪ್‌ನ್ನು ಬಿಗಿಗೊಳಿಸಿರುವುದು ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ಮೌನವಾಗಿಸಲು ಮತ್ತು ಸಂಭಾವ್ಯ ಅಂತರರಾಷ್ಟ್ರೀಯ ಅಪರಾಧಗಳ ದಾಖಲೀಕರಣಕ್ಕೆ ಅಡ್ಡಿಯನ್ನುಂಟು ಮಾಡಲು ಇಸ್ರೇಲಿ ಅಧಿಕಾರಿಗಳ ಕಾರ್ಯತಂತ್ರವನ್ನು ಸೂಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಫೆಲೆಸ್ತೀನ್ ಪರ ಪ್ರತಿಭಟನೆಗಳು ಮತ್ತು ಭಾಷಣಗಳ ನಿರ್ಬಂಧಗಳು ಹಾಗೂ ದಮನಗಳನ್ನು ಕಂಡಿರುವ ತಾರತಮ್ಯ ಮತ್ತು ಇಬ್ಬಗೆ ನಿಲುವುಗಳನ್ನು ಕಟುವಾಗಿ ಟೀಕಿಸಿರುವ ಖಾನ್, ಜರ್ಮನಿ ಮತ್ತು ಇತರ ಐರೋಪ್ಯ ದೇಶಗಳಲ್ಲಿನ ನಿಷೇಧಗಳನ್ನು, ಅಮೆರಿಕದ ಕಾಲೇಜು ಕ್ಯಾಂಪಸ್‌ಗಳಲ್ಲಿ ಕಠಿಣವಾಗಿ ಹತ್ತಿಕ್ಕಲ್ಪಟ್ಟ ಪ್ರತಿಭಟನೆಗಳು ಮತ್ತು ಕೆಲವು ದೇಶಗಳಲ್ಲಿ ಫೆಲೆಸ್ತೀನ್ ರಾಷ್ಟ್ರೀಯ ಚಿಹ್ನೆಗಳು ಮತ್ತು ಘೋಷಣೆಗಳನ್ನು ನಿಷೇಧಿಸಿರುವುದನ್ನು ಹಾಗೂ ಅಪರಾಧೀಕರಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಶೈಕ್ಷಣಿಕ ಮತ್ತು ಕಲಾ ವಲಯದಲ್ಲಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುತ್ತಿರುವುದನ್ನು ಮತ್ತು ಮೂಲೆಗುಂಪು ಮಾಡುತ್ತಿರುವುದನ್ನೂ ಎತ್ತಿ ತೋರಿಸಿರುವ ಖಾನ್, ವಿಶ್ವದಲ್ಲಿಯ ಕೆಲವು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ತಮ್ಮ ಸಮುದಾಯದ ಎಲ್ಲ ಸದಸ್ಯರನ್ನು, ಅವರು ಯಹೂದಿ, ಫೆಲೆಸ್ತೀನಿ, ಇಸ್ರೇಲಿ, ಅರಬ್, ಮುಸ್ಲಿಮ್ ಅಥವಾ ಇತರ ಯಾರೇ ಆಗಿರಲಿ, ರಕ್ಷಿಸುವಲ್ಲಿ ವಿಫಲಗೊಳ್ಳುತ್ತಿವೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಗಾಝಾಕ್ಕೆ ಮತ್ತು ಅಲ್ಲಿಂದ ಸಂವಹನಗಳಿಗೆ ಜೀವನಾಡಿಯಾಗಿದ್ದರೂ ಅವುಗಳಲ್ಲಿಯೂ ತಪ್ಪು ಮಾಹಿತಿಗಳು ಮತ್ತು ದ್ವೇಷಭಾಷಣಗಳ ಪ್ರಸಾರ ಹೆಚ್ಚುತ್ತಿದೆ. ಅರಬ್ಬರು, ಯಹೂದಿಗಳು, ಇಸ್ರೇಲಿಗಳು ಮತ್ತು ಫೆಲೆಸ್ತೀನಿಗಳು ಹೀಗೆ ಎಲ್ಲರನ್ನೂ ಆನ್‌ಲೈನ್‌ನಲ್ಲಿ ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಅದು ದಶಕಗಳಿಂದಲೂ ಫೆಲೆಸ್ತೀನ್ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು ಸಾರ್ವಜನಿಕ ಹಿತಾಸಕ್ತಿ, ಪರಿಶೀಲನೆ ಮತ್ತು ವಿಮರ್ಶೆಯ ವಿಷಯಗಳಾಗಿವೆ ಎಂದು ಖಾನ್ ತನ್ನ ವರದಿಯಲ್ಲಿ ಒತ್ತಿ ಹೇಳಿದ್ದಾರೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮಾಜಿ ಮಹಾ ಕಾರ್ಯದರ್ಶಿಯೂ ಆಗಿರುವ ಖಾನ್ ಈ ಹಿಂದೆ ‘ಗಾಝಾ ಸಂಘರ್ಷದಿಂದ ಉದ್ಭವಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಜಾಗತಿಕ ಬಿಕ್ಕಟ್ಟು’ ಕುರಿತು ತನ್ನ ವರದಿಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಾನವ ಹಕ್ಕು ಸಮಿತಿಗರ ಸಲ್ಲಿಸಿದ್ದರು.

ಇಸ್ರೇಲ್ ತನ್ನ ವರದಿಗೆ ಪ್ರತಿಕ್ರಿಯಿಸಿತ್ತು ಮತ್ತು ದೇಶದ ಕಾನೂನುಗಳನ್ನು ವಿವರಿಸಿತ್ತು. ಜೊತೆಗೆ ಗಾಝಾದಲ್ಲಿನ ಸಂಘರ್ಷವು ನಿಜಕ್ಕೂ ಜಾಗತಿಕ ಮಹತ್ವವನ್ನು ಹೊಂದಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿತ್ತು ಎಂದು ಖಾನ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಘರ್ಷವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಾಝಾದಲ್ಲಿರುವುವಷ್ಟು ಗಂಭೀರ ಬೆದರಿಕೆಗಳನ್ನು ಒಡ್ಡಿಲ್ಲ ಮತ್ತು ಅವುಗಳ ಬೆದರಿಕೆ ತಮ್ಮ ಗಡಿಗಳಿಗೆ ಸೀಮಿತವಾಗಿವೆ. ಆದರೆ ಗಾಝಾದಲ್ಲಿನ ಬೆದರಿಕೆ ಅದರ ಗಡಿಗಳನ್ನೂ ಮೀರಿ ವಿಸ್ತರಿಸಿದೆ ಎಂದು ಹೇಳಿರುವ ಖಾನ್, ಮಾಧ್ಯಮಗಳ ಮೇಲಿನ ದಾಳಿಯು ಗಾಝಾದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿಯಲು ಬಯಸಿರುವ ವಿಶ್ವಾದ್ಯಂತದ ಜನರ ಮಾಹಿತಿ ಹಕ್ಕಿನ ಮೇಲಿನ ದಾಳಿಯಾಗಿದೆ ಎಂದಿದ್ದಾರೆ.

ಅಗತ್ಯ ನಾಗರಿಕ ಕಾರ್ಯಕರ್ತರಾಗಿ ಪತ್ರಕರ್ತರ ರಕ್ಷಣೆಯನ್ನು ಬಲಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಗೆ ಕರೆ ನೀಡಿದ್ದೇನೆ ಎಂದು ಖಾನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News