ಬೈರೂತ್ ನಲ್ಲಿ ಹಮಾಸ್ ನಾಯಕನ ಹತ್ಯೆ ಘಟನೆ ; ಸಂಭಾವ್ಯ ಪರಿಸ್ಥಿತಿ ಎದುರಿಸಲು ಸನ್ನದ್ಧ: ಇಸ್ರೇಲ್ ಘೋಷಣೆ
ಟೆಲ್ಅವೀವ್ : ಹಮಾಸ್ ಹೋರಾಟಗಾರರು ಹಾಗೂ ಇಸ್ರೇಲ್ ನಡುವಿನ ಸಂಘರ್ಷವು ಮಂಗಳವಾರ ಲೆಬನಾನ್ ಗೂ ವಿಸ್ತರಿಸಿದೆ. ದಕ್ಷಿಣ ಬೈರೂತ್ ನಗರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಮಾಸ್ ನ ಉಪನಾಯಕ ಸಲೇಹ್ ಅಲ್-ಅರೌರಿ ಮೃತಪಟ್ಟಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷೆ ಆರಂಭಗೊಂಡ ಬಳಿಕ ಲೆಬನಾನಿನ ರಾಜಧಾನಿ ಮೇಲೆ ನಡೆದ ಮೊತ್ತ ಮೊದಲ ದಾಳಿ ಇದಾಗಿದೆ.
ಹಮಾಸ್ ನಾಯಕ ಸಲೇಹ್ ಅಲ್ ಅರೌರಿ ಹಾಗೂ ಇತರ ಆರು ಮಂದಿ ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ನಡೆದ ಬಾಂಬ್ ದಾಳಿಯೊಂದರಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಯಾವುದೇ ‘ವಿದ್ಯಮಾನ’ವನ್ನು ಎದುರಿಸಲು ತನ್ನ ಅತ್ಯುನ್ನತ ಮಟ್ಟದಲ್ಲಿ ಸಿದ್ಧನಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಹಿಝ್ಬೊಲ್ಲಾ ಹೋರಾಟಗಾರರ ಭದ್ರಕೋಟೆಯಾದ ದಕ್ಷಿಣ ಬೈರೂತ್ ಮೇಲೆ ಮಂಗಳವಾರ ನಡೆದ ಡ್ರೋನ್ ದಾಳಿಯಲ್ಲಿ ಅಲ್ ಅರೌರಿ ಸಾವನ್ನಪ್ಪಿದ್ದಾರೆ. ಆದರೆ ಇಸ್ರೇಲ್ ಈವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
ಈ ಮಧ್ಯೆ ಫೆಲೆಸ್ತೀನ್ ಪ್ರಾಧಿಕಾರದ ಪ್ರಧಾನಿ ಮೊಹಮ್ಮದ್ ಶ್ತಾವೆಹ್ ಅವರು ಹೇಳಿಕೆಯೊಂದನ್ನು ನೀಡಿ, ಗಾಝಾ ಪ್ರಾಂತವು ಹಸಿವಿನಿಂದ ನರಳುತ್ತಿದೆ . ಸಾವಿರಾರು ಮಕ್ಕಳು ಹಾಗೂ ಶಿಶುಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಈ ಪರಿಸ್ಥಿತಿಯು ನಮಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ. ಗಾಝಾದ ಜನತೆಯನ್ನು ಹಸಿವಿಗೆ ದೂಡುವ ಹಾಗೂ ಅವರಿಗೆ ಆಹಾರದ ಪೂರೈಕೆಯನ್ನು ತಡೆಗಟ್ಟುವ ಮೂಲಕ ಇಸ್ರೇಲ್ ಘೋರ ಅಪರಾಧವನ್ನು ಎಸಗುತ್ತಿದೆ ಎಂದು ಮೊಹಮ್ಮದ್ ಶ್ತಾವೆಹ್ ತಿಳಿಸಿದ್ದಾರೆ.
ವಿಶ್ವಸಮುದಾಯವು ಗಾಝಾದ ನಾಗರಿಕರಿಗೆ ಪ್ಯಾರಾಚ್ಯೂಟ್ ಗಳ ಮೂಲಕ ಆಹಾರವನ್ನು ಪೂರೈಕೆ ಮಾಡಬೇಕೆಂದು ಅವರು ಕರೆ ನೀಡಿದರು. ಗಾಝಾದಲ್ಲಿ ಜನಾಂಗೀಯ ನರಮೇಧ ನಡೆಸಲಾಗಿದೆಯೆಂದು ಆರೋಪಿಸಿ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಅವರು ದಕ್ಷಿಣ ಆಫ್ರಿಕ ಸರಕಾರವನ್ನು ಮೊಹಮ್ಮದ್ ಶ್ತಾವೆಹ್ ಅಭಿನಂದಿಸಿದರು.