ಗಾಝಾ ನಿವಾಸಿಗಳ ಸಾಮೂಹಿಕ ವಲಸೆಗೆ ಕರೆ ನೀಡಿದ್ದ ಇಸ್ರೇಲಿ ಸಚಿವ ; ಅಮೆರಿಕದ ಖಂಡನೆಗೆ ಬೆನ್ ಗಿವಿರ್ ಆಕ್ರೋಶ
ಜೆರುಸಲೇಂ : ಗಾಝಾ ಪ್ರದೇಶದಿಂದ ಅಲ್ಲಿನ ಫೆಲೆಸ್ತೀನ್ ನಾಗರಿಕರನ್ನು ಸ್ಥಳಾಂತರಿಸಬೇಕೆಂಬ ತನ್ನ ಬೇಡಿಕೆಯನ್ನು ಖಂಡಿಸಿರುವ ಅಮೆರಿಕದ ವಿರುದ್ಧ ಇಸ್ರೇಲಿ ರಾಷ್ಟ್ರೀಯ ಭದ್ರತಾ ಸಚಿವ ಇತಾಮೆರ್ ಬೆನ್ ಗಿವಿರ್ ಅವರು ಹರಿಹಾಯ್ದಿದ್ದಾರೆ.
‘‘ಅಮೆರಿಕ ನಮ್ಮ ಅತ್ಯುತ್ತಮ ಸ್ನೇಹಿತ. ಆದರೆ ಎಲ್ಲದಕ್ಕಿಂತ ಮೊದಲಾಗಿ ಇಸ್ರೇಲ್ ದೇಶಕ್ಕೆ ಯಾವುದು ಒಳಿತಾಗುವುದೋ ಅದನ್ನು ನಾವು ಮಾಡುವೆವು. ಗಾಝಾದ ಸಹಸ್ರಾರು ನಿವಾಸಿಗಳು ವಲಸೆಹೋಗುವುದರಿಂದ, ಅಲ್ಲಿನ ಇಸ್ರೇಲಿ ನಿವಾಸಿಗಳು ತಮ್ಮ ಮನೆಗಳಿಗೆ ಮರಳುವುದಕ್ಕೆ ಹಾಗೂ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಲಿದೆ ಮತ್ತು ಇಸ್ರೇಲಿ ಸೈನಿಕರನ್ನು ಸಂರಕ್ಷಿಸಲು ಸಾಧ್ಯವಾಗಲಿದೆ’’ ಎಂದು ಕಟ್ಟಾ ಬಲಪಂಥೀಯ ಸಚಿವರಾದ ಗಿವಿರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಝಾ ಪ್ರದೇಶದ ಫೆಲೆಸ್ತೀನಿ ನಿವಾಸಿಗಳನ್ನು ಸ್ಥಳಾಂತರಿಸಬೇಕೆಂದು ಬೆನ್ಗಿವಿರ್ ನೀಡಿರುವ ಕರೆಯನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ.
ಗಾಝಾ ಫೆಲೆಸ್ತೀನಿನ ನೆಲವಾಗಿದ್ದು, ಅದು ಫೆಲೆಸ್ತೀನ್ ನಲ್ಲಿಯೇ ಉಳಿಯಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಕಳೆದ ಮೂರು ತಿಂಗಳುಗಳಿಂದ ಇಸ್ರೇಲ್ ಸೇನೆ ಹಾಗೂ ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಗಾಝಾದಿಂದ ಸುಮಾರು 20.40 ಲಕ್ಷ ನಿವಾಸಿಗಳು ಪಲಾಯನಗೈದಿದ್ದಾರೆ.
ಗಾಝಾ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 22,185 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಅವರಲ್ಲಿ ಹೆಚ್ಚಿನವರು ನಾಗರಿಕರು. ಇಸ್ರೇಲ್ ಸೇನೆ ನಿರಂತರವಾಗಿ ನಡೆಸಿದ ದಾಳಿಗಳಿಂದಾಗಿ ಗಾಝಾ ಪ್ರದೇಶವು ಸ್ಮಶಾನ ಸದೃಶವಾಗಿದೆ.