ಖಾನ್ಯೂನಿಸ್ ನಿಂದ ಲಕ್ಷಕ್ಕೂ ಅಧಿಕ ಮಂದಿಯ ತೆರವಿಗೆ ಇಸ್ರೇಲ್ ಆದೇಶ ; ಗಾಝಾ ಸಂಘರ್ಷ ಇನ್ನಷ್ಟು ಉಲ್ಬಣ ಸಾಧ್ಯತೆ!
ಜೆರುಸಲೇಂ: 20 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಇಸ್ರೇಲ್-ಹಮಾಸ್ ಸಂಘರ್ಷವನ್ನು ಕೊನೆಗೊಳಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ಮುಂದುವರಿದಿರುವಂತೆಯೇ, ದಕ್ಸಿಣ ಗಾಝಾದ ಖಾನ್ಯೂನಿಸ್ ಪ್ರದೇಶವನ್ನು ತೊರೆಯುವಂತೆ ಫೆಲೆಸ್ತೀನಿಯರಿಗೆ ಇಸ್ರೇಲ್ ಮಂಗಳವಾರ ಆದೇಶಿಸಿದೆ.
ಗಾಝಾ ಯುದ್ಧದಿಂದ ಸಂತ್ರಸ್ತರಾದ 1 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರು ಖಾನ್ಯೂನಿಸ್ ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಸಂಘರ್ಷದ ಆರಂಭದಲ್ಲಿಯೇ ದಿಗ್ಭಂಧನಕ್ಕೊಳಗಾಗಿರುವ ಉತ್ತರ ಗಾಝಾ ಪ್ರದೇಶದಿಂದ ನಿರ್ಗಮಿಸುವಂತೆ ಹಾಗೂ ಫೆಲೆಸ್ತೀನ್ ನ ದಕ್ಷಿಣ ಪ್ರಾಂತ ಪ್ರದೇಶಗಳಲ್ಲಿ ಸುರಕ್ಷಿತ ಆಶ್ರಯವನ್ನು ಪಡೆಯುವಂತೆ ಇಸ್ರೇಲ್ ಫೆಲೆಸೀನಿಯರಿಗೆ ಸೂಚಿಸಿತ್ತು.
ಆಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1140 ಮಂದಿ ಮೃತಪಟ್ಟು, ಸುಮಾರು 250 ಮಂದಿ ಅಪಹರಣ ನಡೆದ ಘಟನೆಯ ಬೆನ್ನಲ್ಲೇ ಯುದ್ಧ ಆರಂಭಗೊಂಡಿತ್ತು..
ಇಸ್ರೇಲ್ ಜೊತೆಗಿನ ಯುದ್ಧ ಆರಂಭಗೊಂಡ ಆನಂತರ ಫೆಲೆಸ್ತೀನ್ ನ ಗಾಝಾಪ್ರದೇಶದಲ್ಲಿ ಕನಿಷ್ಠ 20 ಸಾವಿರ ಮಂದಿ ಸಾವನ್ನಪ್ಪಿದ್ದಾರೆಂದು ಗಾಝಾ ಪಟ್ಟಿಯಲ್ಲಿರುವ ಹಮಾಸ್ ಸರಕಾರದ ಮಾಧ್ಯಮ ಕಾರ್ಯಾಲಯವು ಸೂಚಿಸಿದೆ.
ಮೃತಪಟ್ಟವರಲ್ಲಿ 8 ಸಾವಿರ ಮಂದಿ ಮಕ್ಕಳು ಹಾಗೂ 6200 ಮಂದಿ ಮಹಿಳೆಯರೆಂದು ತಿಳಿದುಬಂದಿದೆ.