ಲೆಬನಾನ್ | ಕದನ ವಿರಾಮ ಪ್ರಸ್ತಾಪಕ್ಕೆ ಇಸ್ರೇಲ್ ತಿರಸ್ಕಾರ
ಟೆಲ್‍ಅವೀವ್ : ಲೆಬನಾನ್‍ನಲ್ಲಿ ಕದನ ವಿರಾಮದ ಪ್ರಸ್ತಾಪವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೈತ್ರಿ ಸರಕಾರದ ಇಬ್ಬರು ಸಚಿವರು ಗುರುವಾರ ತಿರಸ್ಕರಿಸಿದ್ದು, ಹಿಜ್ಬುಲ್ಲಾ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಆಗ್ರಹಿಸಿದ್ದಾರೆ.
ಇಸ್ರೇಲ್‍ನ ವಿದೇಶ ಸಚಿವ ಇಸ್ರೇಲ್ ಕಟ್ಝ್ ಮತ್ತು ವಿದೇಶಾಂಗ ಸಚಿವ ಬೆಝಾಲೆಲ್ ಸ್ಮೊಟ್ರಿಚ್ ಕದನ ವಿರಾಮ ಪ್ರಸ್ತಾಪವನ್ನು ತಿರಸ್ಕರಿದ್ದಾರೆ ಎಂದು ವರದಿಯಾಗಿದೆ. ನೆತನ್ಯಾಹು ನೇತೃತ್ವದ ಮೈತ್ರಿಸರಕಾರಕ್ಕೆ ಸ್ಮೊಟ್ರಿಚ್ ಹಾಗೂ ಇತರ ಬಲಪಂಥೀಯ ಸಂಸದರ ಬೆಂಬಲ ನಿರ್ಣಾಯಕವಾಗಿದೆ.
ಲೆಬನಾನ್ ಮೇಲೆ ಈ ವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 600 ಮಂದಿ ಹತರಾಗಿ, ಸಾವಿರಾರು ಮಂದಿ ನೆಲೆ ಕಳೆದುಕೊಂಡ ಹಿನ್ನೆಲೆಯಲ್ಲಿ ಅಮೆರಿಕ, ಯುರೋಪಿಯನ್ ಯೂನಿಯನ್ ಹಾಗೂ ಹಲವು ಅರಬ್ ದೇಶಗಳು ಲೆಬನಾನ್‍ನಲ್ಲಿ 21 ದಿನದ ಯುದ್ಧವಿರಾಮಕ್ಕೆ ಕರೆ ನೀಡಿವೆ. ಪ್ರಸ್ತಾಪವನ್ನು ಕಡೆಗಣಿಸಿರುವ ಪ್ರಧಾನಿ ನೆತನ್ಯಾಹು ಲೆಬನಾನ್‍ನಲ್ಲಿ ಹಿಜ್ಬುಲ್ಲಾ ವಿರುದ್ಧದ ಹೋರಾಟ ಮುಂದುವರಿಸುವಂತೆ ತನ್ನ ಸೇನೆಗೆ ಸೂಚಿಸಿದ್ದಾರೆ. `ಇದು ಅಮೆರಿಕ-ಫ್ರಾನ್ಸ್ ಪ್ರಸ್ತಾವನೆಯಾಗಿದ್ದು ಇದಕ್ಕೆ ಪ್ರಧಾನಿ ಸ್ಪಂದನೆ ಕೂಡಾ ನೀಡಿಲ್ಲ. ಸಂಪೂರ್ಣ ಬಲಪ್ರಯೋಗಿಸಿ ಹೋರಾಟ ಮುಂದುವರಿಸುವಂತೆ ಅವರು ಸೇನೆಗೆ ಆದೇಶಿಸಿದ್ದಾರೆ' ಎಂದು ಪ್ರಧಾನಿಯ ಕಚೇರಿ ಹೇಳಿಕೆ ನೀಡಿದೆ.
ಉತ್ತರದಲ್ಲಿ ನಮ್ಮ ಕಾರ್ಯಾಚರಣೆ ಒಂದೇ ಫಲಿತಾಂಶದೊಂದಿಗೆ ಅಂತ್ಯವಾಗಲಿದೆ. ಹಿಜ್ಬುಲ್ಲಾವನ್ನು ಪುಡಿ ಮಾಡುವುದು ಮತ್ತು ಉತ್ತರದ ನಿವಾಸಿಗಳಿಗೆ ಹಾನಿ ಮಾಡುವ ಅವರ ಸಾಮರ್ಥ್ಯವನ್ನು ನಾಶಗೊಳಿಸುವ ಏಕೈಕ ಗುರಿ ನಮ್ಮೆದುರಿಗಿದೆ. 21 ದಿನದ ಕದನ ವಿರಾಮವು ನಮ್ಮ ಹೊಡೆತದಿಂದ ಚೇತರಿಸಿಕೊಂಡು ಮತ್ತೆ ಸಂಘಟಿತಗೊಳ್ಳಲು ಶತ್ರುಗಳಿಗೆ ಅವಕಾಶ ನೀಡಿದಂತಾಗುತ್ತದೆ. ಯುದ್ಧ ಅಥವಾ ಶರಣಾಗತಿ- ಇವೆರಡೇ ಆಯ್ಕೆ ಈಗ ಹಿಜ್ಬುಲ್ಲಾಗಳ ಎದುರಿದೆ ಎಂದು ಬೆಝಾಲೆಲ್ ಸ್ಮೊಟ್ರಿಚ್ ಹೇಳಿದ್ದಾರೆ.
► ಭೂದಾಳಿಯ ಸುಳಿವು ನೀಡಿದ ಇಸ್ರೇಲ್
ದೇಶದ ಉತ್ತರ ಭಾಗದಲ್ಲಿ ಕಾರ್ಯಾಚರಣೆ ಉದ್ದೇಶಕ್ಕಾಗಿ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ತನ್ನ ಎರಡು ಮೀಸಲು ಬ್ರಿಗೇಡ್‍ಗಳನ್ನು ಕರೆಸಿಕೊಂಡಿದ್ದು ಅವನ್ನು ಲೆಬನಾನ್ ಗಡಿಭಾಗದ ಹತ್ತಿರದಲ್ಲಿ ಇರಿಸಿದೆ. ಲೆಬನಾನ್ ಮೇಲಿನ ಸಂಭಾವ್ಯ ಭೂದಾಳಿಗಾಗಿ ಇಸ್ರೇಲ್ ಯೋಜನೆ ರೂಪಿಸಿರುವ ವರದಿಯಿದೆ ಎಂದು ಬಿಬಿಸಿ ಹೇಳಿದೆ.
`ಲೆಬನಾನ್ ಕಡೆಗೆ ಆಗಸದಲ್ಲಿ ಹಾರುವ ಜೆಟ್‍ಗಳು ನಿಮ್ಮ ಸಂಭವನೀಯ ಪ್ರವೇಶಕ್ಕಾಗಿ ನೆಲವನ್ನು ಸಿದ್ಧಪಡಿಸಲು ಮತ್ತು ಹಿಜ್ಬುಲ್ಲಾದ ಸಾಮರ್ಥ್ಯವನ್ನು ನಾಶಪಡಿಸಲು ವೇದಿಕೆ ಸಿದ್ಧಪಡಿಸುವ ಕಾರ್ಯದಲ್ಲಿವೆ' ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹೆರ್ಝಿ ಹಲೆವಿ ಬುಧವಾರ ಇಸ್ರೇಲ್ ಪಡೆಗಳನ್ನು ಉದ್ದೇಶಿಸಿ ಹೇಳಿರುವುದಾಗಿ ವರದಿಯಾಗಿದೆ.