ʼಒತ್ತೆಯಾಳು ಒಪ್ಪಂದ ಅಥವಾ ರಫಾ ಕಾರ್ಯಾಚರಣೆʼ: ಹಮಾಸ್‍ಗೆ ಒಂದು ವಾರದ ಗಡುವು ನೀಡಿದ ಇಸ್ರೇಲ್

Update: 2024-05-04 17:11 GMT

PC : NDTV

ಟೆಲ್‍ಅವೀವ್: ಒತ್ತೆಯಾಳು ಒಪ್ಪಂದ ಅಥವಾ ರಫಾ ಕಾರ್ಯಾಚರಣೆ - ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಹಮಾಸ್‍ಗೆ ಒಂದು ವಾರದ ಗಡುವು ನೀಡಿರುವುದಾಗಿ ಇಸ್ರೇಲ್ ಹೇಳಿದೆ.

ಒತ್ತೆಯಾಳು ಒಪ್ಪಂದ ಅಥವಾ ಗಾಝಾದ ದಕ್ಷಿಣ ನಗರ ರಫಾದ ಮೇಲೆ ಆಕ್ರಮಣದ ಬಗ್ಗೆ ಆಯ್ಕೆಗೆ ಹಮಾಸ್‍ಗೆ ಒಂದು ವಾರ ಅವಕಾಶ ನೀಡಲಾಗಿದೆ. ಕದನ ವಿರಾಮ ಜಾರಿಗೆ ಈಜಿಪ್ಟ್ ನಲ್ಲಿ ನಡೆಯುತ್ತಿರುವ ಒಪ್ಪಂದದ ಸಂದರ್ಭ ಈ ಆಯ್ಕೆಯನ್ನು ಮುಂದಿರಿಸಲಾಗಿದೆ ಎಂದು ಇಸ್ರೇಲ್ ಮೂಲಗಳನ್ನು ಉಲ್ಲೇಖಿಸಿ `ದಿ ವಾಲ್‍ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

ಗಡುವು ಯಾವತ್ತು ಮುಗಿಯಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿಲ್ಲ. ಆದರೆ ಈಜಿಪ್ಟ್ ಅಧಿಕಾರಿಗಳ ಪ್ರಕಾರ, ನಿರ್ಧಾರ ಕೈಗೊಳ್ಳಲು ಹಮಾಸ್‍ಗೆ ಮುಂದಿನ ಶುಕ್ರವಾರ (ಮೇ 10)ದ ವರೆಗೆ ಸಮಯವಿದೆ.

ವಿದೇಶದಲ್ಲಿರುವ ಹಮಾಸ್‍ನ ರಾಜಕೀಯ ಮುಖಂಡರಿಗೆ ಈ ಪ್ರಸ್ತಾವನೆಯನ್ನು ತಲುಪಿಸಲಾಗಿದ್ದು ಅವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒತ್ತೆಯಾಳು ವಿನಿಮಯ ಒಪ್ಪಂದದಲ್ಲಿ ಕದನ ವಿರಾಮದ ಅವಧಿಯ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಹಮಾಸ್ ಮುಖಂಡರು ಹೇಳಿದ್ದು ದೀರ್ಘಾವಧಿಯ ಕದನ ವಿರಾಮವನ್ನು ಹಮಾಸ್ ಪ್ರತಿಪಾದಿಸುತ್ತಿದೆ. ಹಮಾಸ್‍ನ ರಾಜಕೀಯ ಮುಖಂಡರು ಮುಂದಿನ ವಾರ ಈಜಿಪ್ಟ್ ಗೆ ಆಗಮಿಸಿ ಈ ಕುರಿತು ಮತ್ತಷ್ಟು ಚರ್ಚೆ ನಡೆಸುವ ಸಾಧ್ಯತೆಯಿದೆ. ಗಾಝಾದಲ್ಲಿ ಹಮಾಸ್‍ನ ಮುಖ್ಯಸ್ಥ ಯಾಹ್ಯಾ ಸಿನ್ವರ್ ಈ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವರದಿಯ ಪ್ರಕಾರ, ಒಪ್ಪಂದದ ಪ್ರಥಮ ಹಂತದಲ್ಲಿ 40 ದಿನಗಳಲ್ಲಿ ಸುಮಾರು 33 ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಈ ಅವಧಿಯಲ್ಲಿ ಎರಡೂ ಕಡೆಯವರು ಶಾಶ್ವತ ಕದನ ವಿರಾಮದ ಬಗ್ಗೆ ಮಾತುಕತೆ ಮುಂದುವರಿಸಬೇಕು. ಎರಡನೇ ಹಂತ 6 ವಾರಗಳ ಅವಧಿಯದ್ದಾಗಿದ್ದು ಈ ಹಂತದಲ್ಲಿ ಹೆಚ್ಚಿನ ಒತ್ತೆಯಾಳುಗಳ ಬಿಡುಗಡೆಯಾಗಬೇಕು ಮತ್ತು ಕನಿಷ್ಟ 1 ವರ್ಷದವರೆಗಿನ ಯುದ್ಧವಿರಾಮ ಜಾರಿಗೊಳ್ಳುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿಯಬೇಕು.

ಈ ಮಧ್ಯೆ, ಉತ್ತರ ಗಾಝಾಕ್ಕೆ ಫೆಲೆಸ್ತೀನೀಯರ ವಾಪಸಾತಿಯ ವಿಷಯದಲ್ಲಿ, ಒತ್ತೆಯಾಳುಗಳು ಹಾಗೂ ಕೈದಿಗಳ ವಿನಿಮಯ ಪ್ರಕ್ರಿಯೆಗೆ ಸಂಬಂಧಿಸಿ ಹಮಾಸ್ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಆದರೆ ಗಾಝಾ ನಾಗರಿಕರ ಅನಿರ್ಬಂಧಿತ ವಾಪಸಾತಿಗೆ ಇಸ್ರೇಲ್ ಒಪ್ಪಿದೆ ಎಂದು ಅಮೆರಿಕ ಹೇಳಿದೆ. ಇಸ್ರೇಲ್ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸದೆ, ಕೆಲವು ತಿದ್ದುಪಡಿಯನ್ನು ಹಮಾಸ್ ಮುಂದಿರಿಸುವ ಸಾಧ್ಯತೆಯಿದೆ ಎಂದು `ವಾಲ್‍ಸ್ಟ್ರೀಟ್ ಜರ್ನಲ್' ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News