ದಕ್ಷಿಣ ಗಾಝಾದ ರಫಾ ನಗರದ ಮೇಲೆ ಇಸ್ರೇಲ್ ವಾಯು ದಾಳಿ | ಆರು ಮಕ್ಕಳು ಸೇರಿದಂತೆ ಕನಿಷ್ಠ ಒಂಭತ್ತು ಮಂದಿ ಹತ್ಯೆ
ಗಾಝಾ : ಗಾಝಾದ ದಕ್ಷಿಣ ನಗರವಾದ ರಫಾದಲ್ಲಿನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ ಕನಿಷ್ಠ ಪಕ್ಷ ಒಂಭತ್ತು ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಶನಿವಾರ ಆಸ್ಪತ್ರೆಯ ಪ್ರಾಧಿಕಾರಗಳು ತಿಳಿಸಿವೆ. ಇದರೊಂದಿಗೆ ಆಕ್ರಮಣಕ್ಕೀಡಾಗಿರುವ ಫೆಲಿಸ್ತೀನ್ ಮೇಲಿನ ತನ್ನ ಏಳು ತಿಂಗಳ ದಾಳಿಯನ್ನು ಇಸ್ರೇಲ್ ಮತ್ತೆ ಮುಂದುವರಿಸಿದೆ.
ಹಮಾಸ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ, ಈಗಾಗಲೇ ಚಂಚಲವಾಗಿರುವ ಮಧ್ಯಮ ಪ್ರಾಚ್ಯದಲ್ಲಿ ನಾಟಕೀಯವಾಗಿ ಪ್ರಕ್ಷುಬ್ಧತೆ ಉಲ್ಬಣಿಸಿದೆ.
ಶುಕ್ರವಾರ ತಡರಾತ್ರಿ ರಫಾ ನಗರದ ನೆರೆಯ ನಗರವಾದ ಪಶ್ಚಿಮ ಟೆಲ್ ಸುಲ್ತಾನ್ ನಲ್ಲಿನ ಕಟ್ಟಡವೊಂದರ ಮೇಲೆ ವಾಯು ದಾಳಿ ನಡೆದಿದೆ ಎಂದು ಗಾಝಾದ ನಾಗರಿಕ ರಕ್ಷಣಾ ಪಡೆ ಹೇಳಿದೆ. ಆಸ್ಪತ್ರೆಯ ದಾಖಲೆಗಳ ಪ್ರಕಾರ, ದಾಳಿಗೀಡಾಗಿರುವ ಆರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನ ಮೃತದೇಹಗಳನ್ನು ರಫಾದ ಅಬು ಯೂಸೆಫ್ ಅಲ್-ನಜ್ಜರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
ಆಸ್ಪತ್ರೆಯಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿಡಲಾಗಿದ್ದ ಮಕ್ಕಳ ಮೃತದೇಹಗಳನ್ನು ತಬ್ಬಿಕೊಂಡು ಅವರ ಸಂಬಂಧಿಕರು ರೋದಿಸುತ್ತಿದ್ದರೆ, ಮತ್ತೆ ಕೆಲವರು ಅವರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರ ಪೈಕಿ ಅಬ್ದೆಲ್-ಫತ್ತಾ ಸೋಭಿ ರದ್ವಾನ್, ಅವರ ಪತ್ನಿ ನಜ್ಲಾ ಅಹ್ಮದ್ ಅವೈದಾ ಹಾಗೂ ಅವರ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಬ್ದೆಲ್-ಫತ್ತಾ ಸೋಭಿ ರದ್ವಾನ್ ಅವರ ಭಾಮೈದುನ ಅಹ್ಮದ್ ಬರ್ಹೌಮ್ ತಿಳಿಸಿದ್ದಾರೆ. ಬರ್ಹೌಮ್ ಕೂಡಾ ತಮ್ಮ ಪತ್ನಿ ರವಾನ್ ರದ್ವಾನ್ ಹಾಗೂ ತಮ್ಮ ಐದು ವರ್ಷದ ಪುತ್ರಿ ಅಲಾರನ್ನು ಕಳೆದುಕೊಂಡಿದ್ದಾರೆ