ಗಾಝಾದ ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದ ಜನರ ಮೇಲೆ ಇಸ್ರೇಲ್ ನಿಂದ ವೈಮಾನಿಕ ದಾಳಿ : ಕನಿಷ್ಠ 30 ಮೃತ್ಯು
ಡೈರ್ ಅಲ್-ಬಲಾ (ಗಾಝಾ ಪಟ್ಟಿ): ಕದನ ವಿರಾಮ ಪ್ರಸ್ತಾವದ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಮಧ್ಯವರ್ತಿಗಳನ್ನು ಭೇಟಿಯಾಗಲು ಫೆಲೆಸ್ತೀನ್ ನ ಸಂಧಾನಕಾರರು ಸಿದ್ಧತೆ ನಡೆಸುತ್ತಿರುವಾಗಲೇ, ಶನಿವಾರ ನಿರಾಶ್ರಿತ ಜನರಿಗೆ ಆಶ್ರಯ ನೀಡಲು ಬಳಸಲಾಗುತ್ತಿದ್ದ ಕೇಂದ್ರ ಗಾಝಾದಲ್ಲಿನ ಶಾಲೆಯೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಡೈರ್ ಅಲ್-ಬಲಾದ ಬಾಲಕಿಯರ ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದ ಕನಿಷ್ಠ 30 ಮಂದಿಯನ್ನು ಅಲ್ ಅಕ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರೆಲ್ಲ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನಾ ಪಡೆಯು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲು ಹಾಗೂ ದಾಳಿಯನ್ನು ಯೋಜಿಸಲು ಬಳಸಲಾಗುತ್ತಿದ್ದ ಹಮಾಸ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಿಕೊಂಡು ಈ ವೈಮಾನಿಕ ದಾಳಿಯನ್ನು ನಡೆಸಲಾಗಿದೆ ಎಂದು ಹೇಳಿದೆ. “ಇಸ್ರೇಲ್ ಡಿಫೆನ್ಸ್ ಫೋರ್ಸ್ ತುಕಡಿಗಳ ವಿರುದ್ಧ ಅಸಂಖ್ಯಾತ ದಾಳಿಗಳನ್ನು ನಡೆಸುವ ಯೋಜನೆ ಹಾಗೂ ನಿರ್ದೇಶನಕ್ಕಾಗಿ ಹಮಾಸ್ ಆ ಕಾಂಪೌಂಡ್ ಅನ್ನು ಬಳಸುತ್ತಿತ್ತು ಹಾಗೂ ಅದರೊಳಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಿ, ಸಂಗ್ರಹಿಸಿಡಲಾಗಿತ್ತು” ಎಂದು ಇಸ್ರೇಲ್ ಸೇನೆ ಹೇಳಿದೆ.
ವೈದ್ಯಕೀಯ ಆವರಣವನ್ನು ಹೊಂದಿರುವ ಶಾಲೆಯಲ್ಲಿ ಸಾವಿರಾರು ಮಂದಿ ನಾಗರಿಕರು ಆಶ್ರಯ ಪಡೆದಿದ್ದಾರೆ ಎಂದು ಗಾಝಾದಲ್ಲಿನ ನಾಗರಿಕ ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.
ಮೃತ ದೇಹಗಳನ್ನು ಸಾಗಿಸಲಾಗುತ್ತಿದ್ದ ಆಸ್ಪತ್ರೆಯ ಬಳಿ ಧೂಳು ತುಂಬಿದ ರಸ್ತೆಯಲ್ಲಿ ಆ್ಯಂಬುಲೆನ್ಸ್ ಒಂದು ವೇಗವಾಗಿ ಚಲಿಸುತ್ತಿದ್ದ ಹಾಗೂ ಕೆಲವು ಜನರು ಅದರ ವಿರುದ್ಧ ದಿಕ್ಕಿಗೆ ಓಡುತ್ತಿರುವುದನ್ನು ಕಂಡೆವು ಎಂದು ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ಹೇಳಿದ್ದಾರೆ. ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸ್ಟ್ರೆಚರ್ ಮೇಲೆ ನೆಲದ ಮೇಲೆ ಮಲಗಿದ್ದರೆ, ಕಂಬಳಿ ಹೊದಿಸಲಾಗಿದ್ದ ಮೃತ ಹಸುಗೂಸು ಆ್ಯಂಬುಲೆನ್ಸ್ ಒಳಗಿತ್ತು ಎಂದು ಹೇಳಲಾಗಿದೆ.
ಶಾಲೆಯೊಳಗೆ ತರಗತಿ ಕೊಠಡಿಗಳು ಪಾಳು ಬಿದ್ದಿವೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರನ್ನು ಕೆಲವರು ಹುಡುಕಾಡುತ್ತಿದ್ದರೆ, ಮತ್ತೆ ಕೆಲವರು ಈ ದಾಳಿಯಲ್ಲಿ ಮೃತಪಟ್ಟವರ ಶವಗಳನ್ನು ಹೆಕ್ಕಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ.
ಶನಿವಾರ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಕನಿಷ್ಠ ಪಕ್ಷ 12 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ.