ಗಾಝಾ: ಅಲ್ ಶಿಫಾ ಆಸ್ಪತ್ರೆಯಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆ
ಗಾಝಾ: ಗಾಝಾದ ಅತಿ ದೊಡ್ಡ ಆಸ್ಪತ್ರೆ ಅಲ್-ಶಿಫಾದ ಸುತ್ತ ಇಸ್ರೇಲ್ ಸೇನೆಯು ಸೋಮವಾರ ಕಾರ್ಯಾಚರಣೆ ನಡೆಸಿದೆ. ಆಸ್ಪತ್ರೆಯ ಸುತ್ತಮುತ್ತಲ ಸ್ಥಳಗಳ ಮೇಲೆ ವಾಯು ದಾಳಿಗಳು ನಡೆದಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಇಸ್ರೇಲಿ ಸೈನಿಕರು ಈಗ ಶಿಫಾ ಆಸ್ಪತ್ರೆ ಇರುವ ಪ್ರದೇಶದಲ್ಲಿ ನಿಖರ ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ಇಸ್ರೇಲ್ ಸೇನೆಯ ಹೇಳಿಕೆಯೊಂದು ತಿಳಿಸಿದೆ. “ಹಿರಿಯ ಹಮಾಸ್ ಭಯೋತ್ಪಾದಕರು ಆಸ್ಪತ್ರೆಯನ್ನು ಬಳಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ.
ಆಸ್ಪತ್ರೆಯ ಸುತ್ತ ಯುದ್ಧ ಟ್ಯಾಂಕ್ಗಳು ಜಮಾಯಿಸಿರುವುದನ್ನು ನೋಡಿರುವುದಾಗಿ ಗಾಝಾ ನಗರದಲ್ಲಿ ಪ್ರತ್ಯಕ್ಷದರ್ಶಿಗಳು ಎಎಫ್ಪಿಗೆ ತಿಳಿಸಿದ್ದಾರೆ. ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಸೇನಾ ದಾಳಿಗಳಿಂದ ನಿರ್ವಸಿತರಾಗಿರುವ ಸಾವಿರಾರು ಫೆಲೆಸ್ತೀನೀಯರು ಈ ಆಸ್ಪತ್ರೆಯ ಆವರಣದಲ್ಲಿ ಆಶ್ರಯ ಪಡೆದಿದ್ದಾರೆ. ಇಸ್ರೇಲ್ ಸೇನೆಯು ಕಳೆದ ವರ್ಷದ ನವೆಂಬರ್ ನಲ್ಲೂ ಅಲ್ ಶಿಫಾ ಆಸ್ಪತ್ರೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು. ಆಗ ಅದು ಭಾರೀ ಅಂತರರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಿತ್ತು.
ಹಮಾಸ್ ತನ್ನ ಸೇನಾ ಕಾರ್ಯಾಚರಣೆಗಳನ್ನು ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳಿಂದ ನಡೆಸುತ್ತಿದೆ ಎಂಬುದಾಗಿ ಇಸ್ರೇಲ್ ಪದೇ ಪದೇ ಆರೋಪಿಸಿದೆ. ಆದರೆ, ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಈ ಆರೋಪಗಳನ್ನು ನಿರಾಕರಿಸಿದೆ.
ಗಾಝಾದಲ್ಲಿರುವ ಹಮಾಸ್ ಸರಕಾರದ ಮಾಧ್ಯಮ ಕಚೇರಿಯು ಇಸ್ರೇಲ್ ಸೇನೆಯ ಕಾರ್ಯಾಚರಣೆಯನ್ನು ಖಂಡಿಸಿದೆ. “ಇಸ್ರೇಲ್ ಸೇನೆಯು ಅಲ್-ಶಿಫಾ ವೈದ್ಯಕೀಯ ಸಂಕೀರ್ಣದೊಳಗೆ ಯುದ್ಧ ಟ್ಯಾಂಕ್ಗಳು, ಡ್ರೋನ್ಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿದೆ ಹಾಗೂ ಅಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. ಇದು ಯುದ್ಧಾಪರಾಧವಾಗಿದೆ’’ ಎಂದು ಅದು ಹೇಳಿದೆ.
ಆಸ್ಪತ್ರೆ ದ್ವಾರದಲ್ಲಿ ಇಸ್ರೇಲ್ ಸೇನೆಯಿಂದ ಬೆಂಕಿ?: ಗಾಝಾ ಆರೋಗ್ಯ ಸಚಿವಾಲಯ ಆರೋಪ
ಅಲ್-ಶಿಫಾ ಆಸ್ಪತ್ರೆ ಆವರಣದ ಪ್ರವೇಶ ದ್ವಾರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಿಂದಾಗಿ ಆಸ್ಪತ್ರೆಯ ಆವರಣದಲ್ಲಿ ಆಸರೆ ಪಡೆದಿರುವ ನಿರಾಶ್ರಿತ ಮಹಿಳೆಯರು ಮತ್ತು ಮಕ್ಕಳು ಉಸಿರು ಉಸಿರುಗಟ್ಟುವಂತಾಯಿತು ಎಂದಿದೆ.
ಆಸ್ಪತ್ರೆಯ ಒಳಗೆ ಸಂಪರ್ಕ ಕಡಿದಿದೆ ಹಾಗೂ ಶಸ್ತ್ರಚಿಕಿತ್ಸೆ ಮತ್ತು ತುರ್ತು ಚಿಕಿತ್ಸಾ ಘಟಕಗಳಿರುವ ಕಟ್ಟಡಗಳಲ್ಲಿ ಜನರು ಸಿಕ್ಕಿಹಾಕಿಕೊಂಡಿದ್ದಾರೆ.
“ಬೆಂಕಿಯಿಂದಾಗಿ ಸಾವು-ನೋವುಗಳು ಸಂಭವಿಸಿವೆ. ಬೆಂಕಿಯ ತೀವ್ರತೆಯಿಂದಾಗಿ ಮತ್ತು ಕಿಟಿಕಿ ಕಡೆಗೆ ಬರುವವರ ಮೇಲೆ ದಾಳಿ ನಡೆಯುತ್ತಿರುವುದರಿಂದಾಗಿ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ’’ ಎಂದು ಆರೋಗ್ಯ ಸಚಿಚಾಲಯ ತಿಳಿಸಿದೆ.
ಇಸ್ರೇಲ್ ಪಡೆಗಳು ಆರೋಗ್ಯ ಸಂಸ್ಥೆಗಳ ವಿರುದ್ಧ ಇನ್ನೊಂದು ಅಪರಾಧ ನಡೆಸುತ್ತಿವೆ ಎಂದು ಅದು ಆರೋಪಿಸಿದೆ.
ನಿರ್ವಸಿತರು ಎಲ್ಲಿಗೆ ಹೋಗಬೇಕು?
ಗಾಝಾ ಪಟ್ಟಿಯಾದ್ಯಂತ ರವಿವಾರ ರಾತ್ರಿ ಇಸ್ರೇಲ್ ಸೇನೆಯ ದಾಳಿಯಲ್ಲಿ ಡಝನ್ಗಟ್ಟಳೆ ಜನರು ಮೃತಪಟ್ಟಿದ್ದಾರೆ ಎಂದು ಹಮಾಸ್ ಆಡಳಿತಕ್ಕೆ ಒಳಪಟ್ಟ ಆರೋಗ್ಯ ಸಚಿವಾಲಯ ಸೋಮವಾರ ಮುಂಜಾನೆ ತಿಳಿಸಿದೆ. ವಾರಾಂತ್ಯದಲ್ಲಿ, ಮಧ್ಯ ಗಾಝಾದ ಡೇಯಿರ್ ಅಲ್-ಬಲಾಹ್ನಲ್ಲಿರುವ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಒಂದೇ ಕುಟುಂಬದ 12 ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅದು ಹೇಳಿದೆ.
ಕಳೆದ ಕೆಲವು ವಾರಗಳಿಂದ ದಕ್ಷಿಣ ಗಾಝಾವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ಸೇನೆಯು ಆಕ್ರಮಣ ನಡೆಸುತ್ತಿದೆ. ಇಸ್ರೇಲ್ ಸೇನೆಯ ದಾಳಿಗೆ ಬೆದರಿ ಗಾಝಾದ ಇತರ ಭಾಗಗಳ ಜನರು ದಕ್ಷಿಣ ಗಾಝಾಕ್ಕೆ ಪಲಾಯನಗೈದಿದ್ದಾರೆ. ಹಮಾಸ್ ಭಯೋತ್ಪಾದಕರ ಬೆನ್ನತ್ತಿ ಇಸ್ರೇಲ್ ಸೇನೆಯು ಬರುವ ಮೊದಲು ದಕ್ಷಿಣ ಗಾಝಾದಲ್ಲಿ ಜಮಾಯಿಸಿರುವ ನಾಗರಿಕರು ಅಲ್ಲಿಂದ ಹೋಗಬೇಕು ಎಂಬುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಎಚ್ಚರಿಕೆ ನೀಡಿದ್ದರು.
ಆದರೆ, ಅವರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯನ್ನು ಮಾನವಹಕ್ಕುಗಳ ಕಾರ್ಯಕರ್ತರು ಕೇಳುತ್ತಿದ್ದಾರೆ.