ಗಾಝಾ ವಸತಿ ಪ್ರದೇಶದ ಮೇಲೆ ಇಸ್ರೇಲ್ ನಿಂದ ವೈಮಾನಿಕ ದಾಳಿ: 29 ಮಂದಿ ಮೃತ್ಯು
ದೇರ್ ಅಲ್-ಬಲಾಹ್: ಗಾಝಾದ ಜನವಸತಿ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಬುಧವಾರ ಕನಿಷ್ಠ 29 ಜನರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ನ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಧವಾರ ಮುಂಜಾನೆ ಇಸ್ರೇಲ್ ಸೇನೆಯು ಉತ್ತರ ಗಾಝಾದ ಕಮಲ್ ಅದ್ವಾನ್ ಆಸ್ಪತ್ರೆಯ ಸಮೀಪವಿರುವ ಬೀಟ್ ಲಾಹಿಯಾದಲ್ಲಿನ ವಸತಿ ಕಟ್ಟಡದ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಮಹಡಿಯಲ್ಲಿ ದಾಳಿಗೆ ಮೊದಲು 30 ಜನರು ವಾಸಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿದೆ.
ಜನರು ಬಾಂಬ್ ದಾಳಿ ನಡೆದ ವಸತಿ ಕಟ್ಟಡದ ಅವಶೇಷಗಳಡಿಯಿಂದ ಮೃತದೇಹವನ್ನು ತೆಗೆಯುತ್ತಿರುವ ವೀಡಿಯೊವನ್ನು AL JAZEERA ಹಂಚಿಕೊಂಡಿದೆ. ಇನ್ನೊಂದೆಡೆ ನುಸಿರಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ. ಗಾಝಾ ನಗರದ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು AL JAZEERA ವರದಿ ಮಾಡಿದೆ.