ಫೆಲೆಸ್ತೀನ್ ನಿರಾಶ್ರಿತರಿದ್ದ ಶಾಲಾಕಟ್ಟಡಕ್ಕೆ ಇಸ್ರೇಲ್ ಕ್ಷಿಪಣಿ ದಾಳಿ | ಕನಿಷ್ಠ 30 ಮಂದಿ ಮೃತ್ಯು

Update: 2024-06-06 17:08 GMT

ಸಾಂದರ್ಭಿಕ ಚಿತ್ರ 

 

ಗಾಝಾ ನಗರ : ಕೇಂದ್ರ ಗಾಝಾದಲ್ಲಿ ಫೆಲೆಸ್ತೀನ್ ನಿರಾಶ್ರಿತರು ಆಶ್ರಯಪಡೆದಿದ್ದ ಶಾಲೆಯೊಂದರ ಮೇಲೆ ಗುರುವಾರ ನಸುಕಿನ ವೇಳೆ ಇಸ್ರೇಲ್ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 23 ಮಂದಿ ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೀಕರ ದಾಳಿಯನ್ನು ಇಸ್ರೇಲ್‌ ಸಮರ್ಥಿಸಿಕೊಂಡಿದ್ದು, ಹಮಾಸ್ ಹೋರಾಟಗಾರರು ಶಾಲಾ ಕಟ್ಟಡದೊಳಗಿನಿಂದಲೇ ಕಾರ್ಯಾಚರಿಸುತ್ತಿದ್ದರೆಂದು ಆಪಾದಿಸಿದೆ.

ಕೇಂದ್ರ ಗಾಝಾದಲ್ಲಿ ಹಲವಾರು ನಿರಾಶ್ರಿತ ಶಿಬಿರಗಳಲ್ಲಿ ಹಮಾಸ್ ಹೋರಾಟಗಾರರು ಕಾರ್ಯಾಚರಿಸುತ್ತಿರುವುದರಿಂದ ಅವುಗಳ ಮೇಲೆ ಸರಣಿ ಭೂ ಹಾಗೂ ವಾಯುದಾಳಿಗಳನ್ನು ನಡೆಸುವುದಾಗಿ ಇಸ್ರೇಲ್ ಸೇನೆ ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಅಲ್ ಸರ್ದಿ ಶಾಲೆಯಲ್ಲಿ ಫೆಲೆಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ ನಡೆಸುತ್ತಿದ್ದ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ಸೇನೆ ನಸುಕಿನಲ್ಲಿ ವಾಯುದಾಳಿ ನಡೆಸಿದೆ. ಉತ್ತರ ಗಾಝಾದಲ್ಲಿ ಇಸ್ರೇಲ್ ಸೇನೆಯ ಆಕ್ರಮಣ ಹಾಗೂ ಬಾಂಬ್ ದಾಳಿಯಿಂದ ಪರಾರಿಯಾದ ಫೆಲೆಸ್ತೀನ್ ನಿರಾಶ್ರಿತರಿಂದ ಈ ಶಾಲೆ ತುಂಬ್ತಿತ್ತು.

ನಿರಾಶ್ರಿತ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದ ಶಾಲೆಯ ಎರಡನೆ ಹಾಗೂ ಮೂರನೇ ಅಂತಸ್ತಿನಲ್ಲಿರುವ ತರಗತಿ ಕೊಠಡಿಗಳಿಗೆ ಕ್ಷಿಪಣಿಗಳು ಅಪ್ಪಳಿಸಿದವು ಎಂದು ಗಾಝಾ ನಗರದ ನಿರಾಶ್ರಿತ ಆಯ್‌ಮಾನ್ ರಶೀದ್ ತಿಳಿಸಿದ್ದಾರೆ. ಓರ್ವ ವೃದ್ಧ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿಯ ಮೃತದೇಹಗಳನ್ನು ತಾನು ನೆರವಾಗಿದ್ದಾಗಿ ಆತ ಹೇಳಿದ್ದಾನೆ.

9 ಮಹಿಳೆಯರು ಹಾಗೂ 14 ಮಕ್ಕಳು ಸೇರಿದಂತೆ ಶಾಲಾ ಕಟ್ಟಡದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಕನಿಷ್ಠ 33 ಮಂದಿ ಮೃತದೇಹಳನ್ನು ತಾವು ಸ್ವೀಕರಿಸಿರುವುದಾಗಿ ಸಮೀಪ ಪಟ್ಟಣವಾದ ಅಲ್-ಬಲಾಹ್‌ನ ಅಲ್‌ಅಕ್ಸಾ ಹುತಾತ್ಮರ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ‘ಡಾಕ್ಟರ್ಸ್‌ ವಿದೌಟ್ ಬಾರ್ಡರ್ಸ್‌’ (ಸೀಮಾತೀತ ವೈದ್ಯರು) ಎಂಬ ಸಂಘಟನೆಯು ಬಹುತೇಕ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಕನಿಷ್ಠ 70 ಮೃತದೇಹಗಳು ಹಾಗೂ 300 ಮಂದಿ ಗಾಯಾಳುಗಳನ್ನು ಅಲ್-ಬಲಾಹ್‌ನ ಆಸ್ಪತ್ರೆಗೆ ತರಲಾಗಿದೆಯೆಂದು ತಿಳಿಸಿದೆ.

ಸುಮಾರು ಎಂಟು ತಿಂಗಳುಗಳ ಯುದ್ಧದಲ್ಲಿ ಗಾಝಾದ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದುಬಿದ್ದಿದೆ. 700 ಮಂದಿ ಗಾಯಾಳುಗಳು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಈ ಆಸ್ಪತ್ರೆಯಲ್ಲಿರುವ ಎರಡು ಜನರೇಟರ್‌ಗಳ ಪೈಕಿ ಒಂದು ಕೆಟ್ಟುಹೋಗಿದೆ. ಇದರಿಂದಾಗಿ ವೆಂಟಿಲೇಟರ್ ಹಾಗೂ ನವಜಾತಶಿಶುಗಳಿಗಾಗಿನ ಇನ್‌ಕ್ಯುಬೇಟರ್‌ಗಳ ಕಾರ್ಯನಿರ್ವಹಣೆಗೆ ತೊಡಕುಂಟಾಗಿದೆಯೆಂದು ಅದು ಹೇಳಿದೆ.

ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾದಾಗಿನಿಂದ ಗಾಝಾದಾದ್ಯಂತದ ಶಾಲಾ ಕಟ್ಟಡಗಳಲ್ಲಿ ಯುಎನ್‌ಆರ್‌ಡಬ್ಲ್ಯುಎ ಫೆಲೆಸ್ತೀನ್ ನಿರಾಶ್ರಿತ ಶಿಬಿರಗಳನ್ನು ನಡೆಸುತ್ತಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ಯುದ್ಧದಲ್ಲಿ 15 ಸಾವಿರ ಮಕ್ಕಳು ಸೇರಿದಂತೆ ಕನಿಷ್ಠ 36 ಸಾವಿರ ಮಂದಿ ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಗಾಝಾದಲ್ಲಿ ಇಸ್ರೇಲ್‌ನಿಂದ ನರಮೇಧ | ಐಸಿಜೆಯಲ್ಲಿ ದಕ್ಷಿಣ ಆಫ್ರಿಕದ ಮೊಕದ್ದಮೆಗೆ ಕೈಜೋಡಿಸಿದ ಸ್ಪೇನ್

 ಗಾಝಾದಲ್ಲಿ ಇಸ್ರೇಲ್ ಜನಾಂಗೀಯ ನರಮೇಧ ನಡೆಸುತ್ತಿದೆಯೆಂದು ಆಪಾದಿಸಿ ಮೊಕದ್ದಮೆ ಹೂಡಿರುವ ದಕ್ಷಿಣ ಆಫ್ರಿಕದ ಜೊತೆಗೂಡಲು ತನಗೆ ಅನುಮತಿ ನೀಡಬೇಕಂದು ಸ್ಪೇನ್ ಗುರುವಾರ ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಕೋರಿದರೆ.

ಕಳೆದ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕವು ಮೊಕದ್ದಮೆ ಹೂಡಿದ ಬಳಿಕ, ಅದನ್ನು ಅನುಸರಿಸಿದ ಯುರೋಪ್ ಖಂಡದ ಮೊದಲ ರಾಷ್ಟ್ರ ಸ್ಪೇನ್ ಆಗಿದೆ. ಗಾಝಾಲ್ಲಿ ಇಸ್ರೇಲ್‌ನ ಸೇನಾಕ್ರಮಣವು ವಿಶ್ವಸಂಸ್ಥೆಯ ಜನಾಂಗೀಯ ನರಮೇಧ ವಿರೋಧಿ ಒಡಂಬಡಿಕೆಯನ್ನು ಉಲ್ಲಂಘಿಸಿದೆಯೆಂದು ಸ್ಪೇನ್ ಆಪಾದಿಸಿದೆ.

ತಮ್ಮನ್ನು ಈ ಪ್ರಕರಣದಲ್ಲಿ ಸೇರ್ಪಡೆಗೊಳಿಸಬೇಕೆಂದು ಮೆಕ್ಸಿಕೊ, ಕೊಲಂಬಿಯಾ, ನಿಕಾರಗುವಾ, ಲಿಬಿಯ ಹಾಗೂ ಫೆಲೆಸ್ತೀನಿಯರು ಈಗಾಗಲೇ ಮನವಿ ಮಾಡಿವೆ. ರಫಾದ ದಕ್ಷಿಣ ಗಾಝಾ ನಗರದಲ್ಲಿ ಸೇನಾಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಲಯವು ಇಸ್ರೇಲ್‌ಗೆ ಆದೇಶಿಸಿದೆ. ಆದರೆ ಗಾಝಾ ಪಟ್ಟಿಯಲ್ಲಿ ಕದನವಿರಾಮವನ್ನು ಘೋಷಿಸಬೇಕೆಂಬ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಿರಲಿಲ್ಲ. ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಲ್ಲಿ ತಾವು ಈ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಸ್ಪೇನ್‌ನ ವಿದೇಶಾಂಗ ಸಚಿವ ಜೋಸ್ ಮ್ಯಾನುವೆಲ್ ಅಲ್ಬಾರೆಸ್ ತಿಳಿಸಿದ್ದಾರೆ. ಗಾಝಾ ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಮರಳುವುದನ್ನು ನಾವು ಬಯಸುತ್ತಿದ್ದೇವೆ. ಅದು ನಡೆಯಬೇಕಾದರೆ ನಾವೆಲ್ಲರೂ ನ್ಯಾಯಾಲಯವನ್ನು ಬೆಂಬಲಿಸಬೇಕಾಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News