ಗೋಲನ್ ಹೈಟ್ಸ್ ನಲ್ಲಿ ಉಪಸ್ಥಿತಿ ಹೆಚ್ಚಿಸಲು ಇಸ್ರೇಲ್ ನಿರ್ಧಾರ; 11 ದಶಲಕ್ಷ ಡಾಲರ್ ಮೊತ್ತದ ಯೋಜನೆ ಸಿದ್ಧ

Update: 2024-12-16 16:52 GMT

ಬೆಂಜಮಿನ್ ನೆತನ್ಯಾಹು | PC : PTI

ಜೆರುಸಲೇಂ: ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್ ಪದಚ್ಯುತಗೊಂಡ ಬಳಿಕವೂ ಸಿರಿಯಾದಲ್ಲಿ ಬೆದರಿಕೆ ಉಳಿದಿರುವುದರಿಂದ ಆಕ್ರಮಿತ ಗೋಲನ್ ಹೈಟ್ಸ್ ನಲ್ಲಿ ತನ್ನ ಜನಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಗೋಲನ್ ಹೈಟ್ಸ್ ಅನ್ನು ಸದೃಢಗೊಳಿಸಿದರೆ ಇಸ್ರೇಲನ್ನು ಸದೃಢಗೊಳಿಸಿದಂತಾಗುತ್ತದೆ ಮತ್ತು ಅದು ಈಗ ವಿಶೇಷ ಅಗತ್ಯವಾಗಿದೆ. ಇದಕ್ಕೆ ನಾವು ಬದ್ಧವಾಗಿರುತ್ತೇವೆ. ಗೋಲನ್ ಹೈಟ್ಸ್ ನಲ್ಲಿ ಇಸ್ರೇಲಿಯನ್ನರ ಸಂಖ್ಯೆಯನ್ನು ದ್ವಿಗುಣಗೊಳಿಸಲಿದ್ದೇವೆ' ಎಂದು ಇಸ್ರೇಲ್ ಪ್ರಧಾನಿ

ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 1967ರಲ್ಲಿ ಸಿರಿಯಾದ ಜತೆ ನಡೆಸಿದ ಯುದ್ಧದಲ್ಲಿ ಅತ್ಯಂತ ಆಯಕಟ್ಟಿನ ಗೋಲನ್ ಹೈಟ್ಸ್ ನ ಬಹುತೇಕ ಪ್ರದೇಶಗಳನ್ನು ಇಸ್ರೇಲ್ ವಶಕ್ಕೆ ಪಡೆದಿತ್ತು ಮತ್ತು 1981ರಲ್ಲಿ ಈ ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆದಿತ್ತು. ಇಸ್ರೇಲ್‍ನ ಈ ನಡೆಗೆ 2019ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ ಬೆಂಬಲ ಘೋಷಿಸಿದ್ದು ಹೊರತುಪಡಿಸಿ ಇತರ ಯಾವುದೇ ರಾಷ್ಟ್ರ ಮಾನ್ಯ ಮಾಡಿಲ್ಲ ಮತ್ತು ವಿಶ್ವಸಂಸ್ಥೆಯೂ ವಿರೋಧಿಸಿದೆ. ಗೋಲನ್ ಹೈಟ್ಸ್ ನಿಂದ ಹಿಂದೆ ಸರಿಯುವಂತೆ ಸಿರಿಯಾದ ಆಗ್ರಹವನ್ನು ಇಸ್ರೇಲ್ ತಿರಸ್ಕರಿಸಿದ್ದು ಭದ್ರತೆಗೆ ಬೆದರಿಕೆ ಇರುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದಿದೆ.

`ದೇಶಕ್ಕೆ ಸನ್ನಿಹಿತ ಅಪಾಯ ಕಣ್ಮರೆಯಾಗಿಲ್ಲ ಮತ್ತು ಸಿರಿಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಬೆದರಿಕೆಯ ಮಟ್ಟವನ್ನು ಹೆಚ್ಚಿಸಿದೆ' ಎಂದು ರಕ್ಷಣಾ ಸಚಿವ ಇಸ್ರಾಯೆಲ್ ಕಾಟ್ಝ್ ಹೇಳಿದ್ದಾರೆ. ಗೋಲನ್ ಹೈಟ್ಸ್ ನಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಇಸ್ರೇಲ್ ಸರಕಾರ 11 ದಶಲಕ್ಷ ಡಾಲರ್‍ಗೂ ಹೆಚ್ಚು ಮೊತ್ತದ ಯೋಜನೆಯನ್ನು ಸರ್ವಾನುಮತದಿಂದ ಅನುಮೋದಿಸಿದೆ . ಸಿರಿಯಾ ಯುದ್ಧದಲ್ಲಿನ ಇತ್ತೀಚಿಗಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಮತ್ತು ಗೋಲನ್ ಹೈಟ್ಸ್ ನ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದ ಯೋಜನೆಯನ್ನು ಪ್ರಧಾನಿ ನೆತನ್ಯಾಹು ಸರಕಾರಕ್ಕೆ ಸಲ್ಲಿಸಿದ್ದರು ಎಂದು ಪ್ರಧಾನಿಯ ಕಚೇರಿ ಹೇಳಿಕೆ ನೀಡಿದೆ. ಗೋಲನ್ ಹೈಟ್ಸ್‍ನಲ್ಲಿ ಸುಮಾರು 31,000 ಇಸ್ರೇಲಿಯನ್ನರು ನೆಲೆಸಿದ್ದು ದ್ರಾಕ್ಷಿ ತೋಟಗಳು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಡ್ರೂಝ್ ಸಮುದಾಯದ(ಅರಬ್ ಅಲ್ಪಸಂಖ್ಯಾತರು) ಸುಮಾರು 24,000 ನಿವಾಸಿಗಳಿದ್ದು ಹೆಚ್ಚಿನರು ಸಿರಿಯನ್ನರೆಂದು ಗುರುತಿಸಿಕೊಳ್ಳುತ್ತಿದ್ದಾರೆ.

ಇಸ್ರೇಲ್ ಸಿರಿಯಾದ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳಲು ಸುಳ್ಳು ನೆಪಗಳನ್ನು ಬಳಸುತ್ತಿದೆ ಎಂದು ಸಿರಿಯಾದ ಸಶಸ್ತ್ರ ಹೋರಾಟಗಾರರ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್(ಎಚ್‍ಟಿಎಸ್)ನ ಮುಖ್ಯಸ್ಥ ಅಬು ಮುಹಮ್ಮದ್ ಅಲ್-ಗೊಲಾನಿ ಆರೋಪಿಸಿದ್ದಾರೆ. ಆದರೆ, ಇದೀಗ ಸಿರಿಯಾದ ಮರು ನಿರ್ಮಾಣದ ಬಗ್ಗೆ ಗಮನ ನೀಡಬೇಕಿರುವುದರಿಂದ ಇಸ್ರೇಲ್ ಜತೆ ಸಂಘರ್ಷದಲ್ಲಿ ತಮಗೆ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯುದ್ಧದಿಂದ ಜರ್ಝರಿತಗೊಂಡಿರುವ ಸಿರಿಯಾದ ಸ್ಥಿತಿಯು ಹೊಸ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ಇದೀಗ ಸ್ಥಿರತೆಯ ಬಗ್ಗೆ ಆದ್ಯತೆ ನೀಡಬೇಕಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, 1973ರ ಅರಬ್-ಸಿರಿಯಾ ಯುದ್ಧದ ಬಳಿಕ ಸಿರಿಯಾದೊಳಗೆ ರಚಿಸಿರುವ ಮಿಲಿಟರಿ ರಹಿತ ವಲಯ(ಬಫರ್ ವಲಯ)ದೊಳಗೆ ಇಸ್ರೇಲ್ ಸೇನೆ ಪ್ರವೇಶಿಸಿದ್ದು ಇಲ್ಲಿ ಸಿರಿಯಾದ ಪಡೆ ತ್ಯಜಿಸಿರುವ ಸೇನಾನೆಲೆಯನ್ನು ವಶಕ್ಕೆ ಪಡೆದಿರುವುದನ್ನು ಸೌದಿ ಅರೆಬಿಯಾ, ಯುಎಇ, ಜೋರ್ಡಾನ್ ಸೇರಿದಂತೆ ಹಲವು ಅರಬ್ ದೇಶಗಳು ಖಂಡಿಸಿವೆ.

ಯೋಜನೆ ಕೈಬಿಡಲು ಜರ್ಮನಿ ಆಗ್ರಹ:

ಆಕ್ರಮಿತ ಗೋಲನ್ ಹೈಟ್ಸ್‍ನಲ್ಲಿ ಇಸ್ರೇಲಿ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಕೈ ಬಿಡುವಂತೆ ಜರ್ಮನಿ ಸೋಮವಾರ ಇಸ್ರೇಲನ್ನು ಆಗ್ರಹಿಸಿದೆ.

`ಗೋಲನ್ ಹೈಟ್ಸ್ ನಲ್ಲಿ ಇಸ್ರೇಲ್‍ನ ನಿಯಂತ್ರಣದಲ್ಲಿರುವ ಪ್ರದೇಶ ಸಿರಿಯಾಕ್ಕೆ ಸೇರಿದೆ ಮತ್ತು ಇಸ್ರೇಲ್ ಆಕ್ರಮಿಸಿರುವ ಶಕ್ತಿಯಾಗಿದೆ ಎಂಬುದು ಅಂತರಾಷ್ಟ್ರೀಯ ಕಾನೂನಿನಡಿ ಸ್ಪಷ್ಟವಾಗಿದೆ. ಆದ್ದರಿಂದ ಆಕ್ರಮಿತ ಪ್ರದೇಶದಲ್ಲಿ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಇಸ್ರೇಲ್ ಕೈ ಬಿಡಬೇಕು ಎಂದು ಜರ್ಮನ್ ವಿದೇಶಾಂಗ ಇಲಾಖೆಯ ವಕ್ತಾರ ಕ್ರಿಶ್ಚಿಯನ್ ವ್ಯಾಗ್ನರ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News