ಜಪಾನ್ | ಬಹುಮತ ಕಳಕೊಂಡ ಪ್ರಧಾನಿ ಶಿಗೆರು ಇಷಿಬಾ ಪಕ್ಷ

Update: 2024-10-28 16:34 GMT

ಶಿಗೆರು ಇಷಿಬಾ | PC : AP

ಟೋಕಿಯೊ : ಜಪಾನ್‍ ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಪ್ರಧಾನಿ ಶಿಗೆರು ಇಷಿಬಾ ಅವರ ಆಡಳಿತಾರೂಢ ಮೈತ್ರಿಕೂಟ ಬಹುಮತ ಕಳೆದುಕೊಂಡಿದ್ದು ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿದೆ.

ವಿಶ್ವದ 4ನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಜಪಾನ್‍ ನಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಗೋಚರಿಸುತ್ತಿದ್ದಂತೆಯೇ ಯೆನ್ ಕರೆನ್ಸಿಯ ಮೌಲ್ಯ 3 ತಿಂಗಳಲ್ಲೇ ಅತೀ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಪ್ರಧಾನಿ ಇಷಿಬಾ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷ(ಎಲ್‍ಡಿಪಿ) ಮತ್ತು ಅದರ ಮೈತ್ರಿಪಕ್ಷ ಕೊಮೈಟೊ ಸಂಸತ್‍ ನ ಕೆಳಮನೆಯಲ್ಲಿ 215 ಸ್ಥಾನಗಳನ್ನು ಪಡೆದಿದ್ದು 64 ಸ್ಥಾನಗಳನ್ನು ಕಳೆದುಕೊಂಡಿದೆ. ಸರಳ ಬಹುಮತಕ್ಕೆ 233 ಸ್ಥಾನಗಳ ಅಗತ್ಯವಿದೆ. 2021ರ ಚುನಾವಣೆಯಲ್ಲಿ 259 ಸ್ಥಾನಗಳಲ್ಲಿ ಗೆದ್ದಿದ್ದ ಎಲ್‍ಡಿಪಿ ಈ ಬಾರಿ 191 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ.

ಇಬ್ಬರು ಸಚಿವರು ಹಾಗೂ ಕೊಮೈಟೊ ಪಕ್ಷದ ಮುಖಂಡ ಕಿಯಿಚಿ ಇಷಿ ಸೋಲುಂಡಿದ್ದಾರೆ. ಪ್ರಮುಖ ವಿರೋಧ ಪಕ್ಷ ಕಾನ್‍ಸ್ಟಿಟ್ಯೂಷನಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಜಪಾನ್ ಪಕ್ಷ 50 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದ್ದು 148 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸಂವಿಧಾನದ ಪ್ರಕಾರ, 30 ದಿನಗಳೊಳಗೆ ಪಕ್ಷಗಳು ಸರಕಾರ ರಚನೆಗೆ ಅಗತ್ಯವಿರುವ ಬಹುಮತವನ್ನು ಕ್ರೋಢೀಕರಿಸಬೇಕಿದೆ.

ಈ ಮಧ್ಯೆ, ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೂ ಸರಕಾರ ರಚಿಸುವ ವಿಶ್ವಾಸವನ್ನು ಪ್ರಧಾನಿ ಶಿಗೆರು ಇಷಿಬಾ ವ್ಯಕ್ತಪಡಿಸಿದ್ದಾರೆ. ಜನರ ಜೀವವನ್ನು ರಕ್ಷಿಸುವ ಮೂಲಕ, ಜಪಾನ್ ಅನ್ನು ರಕ್ಷಿಸುವ ಮೂಲಕ ನನ್ನ ಕರ್ತವ್ಯವನ್ನು ಪೂರೈಸಲು ಬಯಸುತ್ತೇನೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News