ಲೆಬನಾನ್‍ನಿಂದ ಪ್ರಯೋಗಿಸಿದ ಕ್ಷಿಪಣಿ ಜೋರ್ಡಾನ್‍ನಲ್ಲಿ ಪತನ
ಅಮ್ಮಾನ್ : ದಕ್ಷಿಣ ಲೆಬನಾನ್‍ನಿಂದ ಪ್ರಯೋಗಿಸಿದ ಗ್ರಾಡ್ ಕ್ಷಿಪಣಿಯು ಜೋರ್ಡಾನ್‍ನ ಬಯಲು ಪ್ರದೇಶದಲ್ಲಿ ಪತನಗೊಂಡಿದ್ದು ಯಾವುದೇ ಸಾವು-ನೋವು ಅಥವಾ ನಾಶ-ನಷ್ಟದ ವರದಿಯಾಗಿಲ್ಲ ಎಂದು ಜೋರ್ಡಾನ್‍ನ ಸರಕಾರಿ ಸ್ವಾಮ್ಯದ `ಪೆಟ್ರಾ' ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ಗ್ರಾಡ್ ಕ್ಷಿಪಣಿಯು ಅಮ್ಮಾನ್‍ನ ದಕ್ಷಿಣದಲ್ಲಿರುವ ಮುವಾಕ್ಕರ್ ಜಿಲ್ಲೆಯ ಜನವಸತಿ ಇಲ್ಲದ ಮರುಭೂಮಿಯಲ್ಲಿ ಬಿದ್ದಿದೆ ಎಂದು ಜೋರ್ಡಾನ್‍ನ ಸಶಸ್ತ್ರ ಪಡೆಗಳ ಅಧಿಕಾರಿ ಹೇಳಿದ್ದಾರೆ. ಜೋರ್ಡಾನ್‍ನ ವಾಯುಪ್ರದೇಶವನ್ನು ಉಲ್ಲಂಘಿಸುವ ಕ್ಷಿಪಣಿ, ಡ್ರೋನ್ ಅಥವಾ ಯಾವುದೇ ಕೃತ್ಯವನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ನಿರ್ಬಂಧಿಸಲಿವೆ ಎಂದು ಭದ್ರತಾ ಪಡೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇಸ್ರೇಲ್ ಜತೆ ಗಡಿ ಹಂಚಿಕೊಂಡಿರುವ ಜೋರ್ಡಾನ್ 1994ರಲ್ಲಿ ಇಸ್ರೇಲ್ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
ಪಾಶ್ಚಿಮಾತ್ಯರ ಜತೆ ಗುರುತಿಸಿಕೊಂಡಿರುವ ಅರಬ್ ದೇಶವು ಎಪ್ರಿಲ್‍ನಲ್ಲಿ ಇಸ್ರೇಲ್‍ನತ್ತ ಇರಾನ್ ಪ್ರಯೋಗಿಸಿದ ಕ್ಷಿಪಣಿಯನ್ನು ತುಂಡರಿಸಲೂ ನೆರವಾಗಿತ್ತು. ಆದರೆ ಫೆಲಸ್ತೀನೀಯರ ಕುರಿತ ಇಸ್ರೇಲ್‍ನ ಕಾರ್ಯನೀತಿಯನ್ನು ತೀವ್ರವಾಗಿ ಟೀಕಿಸುತ್ತಿರುವ ಜೋರ್ಡಾನ್ ಗಾಝಾದಲ್ಲಿ ಕದನ ವಿರಾಮಕ್ಕೆ ಪದೇ ಪದೇ ಕರೆ ನೀಡುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ತನ್ನ ಪ್ರದೇಶವನ್ನು ಯುದ್ಧಭೂಮಿಯಾಗಲು ಬಿಡುವುದಿಲ್ಲ ಎಂದು ಜೋರ್ಡಾನ್ ದೃಢಪಡಿಸಿದೆ.