ಲೆಬನಾನ್ | ಇಸ್ರೇಲ್ ದಾಳಿಯಲ್ಲಿ 4 ಮಂದಿ ಮೃತ್ಯು ; 24 ಮಂದಿಗೆ ಗಾಯ

Update: 2024-11-19 17:03 GMT

PC  :PTI

ಬೈರೂತ್ : ಲೆಬನಾನ್ ರಾಜಧಾನಿ ಬೈರೂತ್‍ನಲ್ಲಿ ಹಲವು ಸರಕಾರಿ ಕಟ್ಟಡಗಳ ಸಮೀಪ ನಡೆದ ಇಸ್ರೇಲ್‌ ನ ವೈಮಾನಿಕ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದು ಇತರ ಕನಿಷ್ಠ 24 ಮಂದಿ ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.

ವಿಶ್ವಸಂಸ್ಥೆಯ ಸ್ಥಳೀಯ ಕೇಂದ್ರ ಕಚೇರಿ, ಲೆಬನಾನ್‍ನ ಸಂಸತ್ತು ಮತ್ತು ಪ್ರಧಾನಿಯ ನಿವಾಸಗಳಿರುವ ಮಧ್ಯ ಬೈರೂತ್ ಬಳಿಯ ಝೊಕಾಕ್ ಅಲ್-ಬ್ಲಾಟ್ ನೆರೆಹೊರೆಯ ಪ್ರದೇಶಕ್ಕೆ ಇಸ್ರೇಲ್‌ ನ ಎರಡು ಕ್ಷಿಪಣಿಗಳು ಅಪ್ಪಳಿಸಿವೆ. ಸುಮಾರು ಒಂದು ತಿಂಗಳ ವಿರಾಮದ ಬಳಿಕ ಮಧ್ಯ ಬೈರೂತ್ ಮೇಲೆ ಸತತ ಎರಡು ದಿನ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, ಸೋಮವಾರ ಹಿಜ್ಬುಲ್ಲಾ ಗುಂಪು ಇಸ್ರೇಲ್ ವಿರುದ್ಧ ಹತ್ತಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಒಂದು ಕ್ಷಿಪಣಿ ಉತ್ತರ ಇಸ್ರೇಲ್‌ ನ ಶಫರಮ್ ನಗರಕ್ಕೆ ಅಪ್ಪಳಿಸಿ ಓರ್ವ ಮಹಿಳೆ ಮೃತಪಟ್ಟು ಇತರ 10 ಮಂದಿ ಗಾಯಗೊಂಡಿರುವುದಾಗಿ ಇಸ್ರೇಲ್‌ ನ ಅಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್‌ ನ ವೈಮಾನಿಕ ದಾಳಿ ಹೆಚ್ಚುತ್ತಿರುವುದು ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಒಡ್ಡಿರುವ ಷರತ್ತುಗಳಿಗೆ ಸಮ್ಮತಿಸುವಂತೆ ಲೆಬನಾನ್ ಸರಕಾರದ ಮೇಲೆ ಒತ್ತಡಕ್ಕೆ ಕಾರಣವಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News