ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಮೇಯರ್ ಸಹಿತ 6 ಮಂದಿ ಮೃತ್ಯು

Update: 2024-10-16 15:35 GMT

PC : PTI

ಬೈರುತ್ : ದಕ್ಷಿಣ ಲೆಬನಾನ್‍ನ ನಬಾತಿಯೆಹ್ ಪಟ್ಟಣದ ಪುರಸಭೆ ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೇಯರ್ ಸಹಿತ 6 ಮಂದಿ ಸಾವನ್ನಪ್ಪಿರುವುದಾಗಿ ಲೆಬನಾನ್ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.

ನಬಾತಿಯೆಹ್ ಮತ್ತು ಸುತ್ತಮುತ್ತಲಿನ ಪ್ರದೇಶದ ಮೇಲೆ ಇಸ್ರೇಲ್ 11 ವೈಮಾನಿಕ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ನಗರಸಭೆ ಕಟ್ಟಡ ಮತ್ತು ಪುರಸಭೆ ಒಕ್ಕೂಟದ ಎರಡು ಕಟ್ಟಡಗಳ ಮೇಲಿನ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ. ಮೃತಪಟ್ಟವರಲ್ಲಿ ನಗರದ ಮೇಯರ್ ಕೂಡಾ ಸೇರಿದ್ದಾರೆ. ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿ ಕೆಲವರು ಸಿಕ್ಕಿಬಿದ್ದಿರುವ ಶಂಕೆಯಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ದಕ್ಷಿಣ ಲೆಬನಾನ್ ಮೇಲೆ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದು ಬೈರುತ್‍ನ ದಕ್ಷಿಣದಲ್ಲಿರುವ ದಹಿಯೆಹ್ ನಗರದಲ್ಲಿ ಹಿಜ್ಬುಲ್ಲಾಗಳ ಭೂಗತ ಶಸ್ತ್ರಾಗಾರವನ್ನು ಗುರಿಯಾಗಿಸಿ ಯಶಸ್ವಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನಾಪಡೆ ಬುಧವಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News