ಲೆಬನಾನ್: ಇಟಲಿ ತುಕಡಿಯ ನೆಲೆಗೆ ಇಸ್ರೇಲ್ ಶೆಲ್ ದಾಳಿ
Update: 2024-11-16 17:20 GMT
ರೋಮ್: ಲೆಬನಾನ್‍ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಭಾಗವಾಗಿರುವ ಇಟಲಿ ಸೇನೆಯ ತುಕಡಿಯ ನೆಲೆಗೆ ಇಸ್ರೇಲ್ ಪ್ರಯೋಗಿಸಿದ ಫಿರಂಗಿ ಶೆಲ್(ಸ್ಫೋಟಕ) ಅಪ್ಪಳಿಸಿದ್ದು ಶೆಲ್ ಸ್ಫೋಟಿಸದ ಕಾರಣ ಯಾವುದೇ ಹಾನಿಯಾಗಿಲ್ಲ ಎಂದು ಇಟಲಿ ಹೇಳಿದೆ.
ಶೆಲ್ ದಾಳಿಯನ್ನು ಖಂಡಿಸಿ ಇಸ್ರೇಲ್‍ಗೆ ಆಕ್ಷೇಪ ಸಲ್ಲಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಇಸ್ರೇಲ್ ಭರವಸೆ ನೀಡಿದೆ ಎಂದು ಇಟಲಿ ಸರಕಾರ ಹೇಳಿದೆ.
ಇಸ್ರೇಲ್ ವಿದೇಶಾಂಗ ಸಚಿವ ಗಿಡಾನ್ ಸಾ'ರ್‍ಗೆ ಕರೆ ಮಾಡಿದ ಇಟಲಿ ವಿದೇಶಾಂಗ ಸಚಿವ ಅಂಟೋನಿಯೊ ತಜಾನಿ ಲೆಬನಾನ್‍ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಭಾಗವಾಗಿರುವ ಇಟಲಿಯ ತುಕಡಿ ಹಾಗೂ ಮೂಲಸೌಕರ್ಯಗಳ ವಿರುದ್ಧದ ದಾಳಿಗೆ ಪ್ರತಿಭಟನೆ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಸುರಕ್ಷತೆಯನ್ನು ಖಾತರಿಪಡಿಸುವಂತೆ ಆಗ್ರಹಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.