ಶ್ರೀಲಂಕಾಗೆ ಎಡಪಂಥೀಯ ಅಧ್ಯಕ್ಷ; ಭಾರತಕ್ಕೆ ಹೊಸ ಸವಾಲು
ಹೊಸದಿಲ್ಲಿ: ಮಾಕ್ರ್ಸ್ ವಾದಿ ನಾಯಕ ಅರುಣ ಕುಮಾರ ದಿಸ್ಸನಾಯಕೆ, ತೀವ್ರ ತುರುಸಿನಿಂದ ಕೂಡಿದ್ದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದು, ನೆರೆಯ ದೇಶದ ಜತೆಗಿನ ಸಂಬಂಧದ ವಿಚಾರದಲ್ಲಿ ಭಾರತಕ್ಕೆ ಹೊಸ ಸವಾಲು ಎದುರಾಗಿದೆ.
ಭಾರತಕ್ಕೆ ಅಷ್ಟೊಂದು ಪರಿಚಿತವಲ್ಲದ ನಾಯಕನ ಜತೆಗೆ ವ್ಯವಹರಿಸಬೇಕಾದ ಪರಿಸ್ಥಿತಿ ಇದೆ. ಆದರೆ ಶ್ರೀಲಂಕಾ ಆರ್ಥಿಕ ಸಂಕಷ್ಟದಿಂದ ಹೊರಬರಲು ಭಾರತ ಸರ್ಕಾರ 400 ಶತಕೋಟಿ ಡಾಲರ್ ನೆರವು ಹಾಗೂ ವರ್ಷಾರಂಭದಲ್ಲಿ ಅವರಿಗೆ ಆತಿಥ್ಯ ನೀಡಿದ ವಿಚಾರಗಳು ಭಾರತಕ್ಕೆ ಅನುಕೂಲಕರ ಅಂಶಗಳಾಗಿವೆ. ಬಾಂಗ್ಲಾದೇಶದಿಂದ ಎದುರಾದಂಥ ಆಘಾತಕಾರಿ ಅಂಶಗಳು ಶ್ರೀಲಂಕಾದಿಂದ ಎದುರಾಗುವ ಸಾಧ್ಯತೆಗಳಿಲ್ಲ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಅಭಿನಂದಿಸಿದವರಲ್ಲಿ ಭಾರತದ ಹೈಕಮಿಷನರ್ ಸಂತೋಷ್ ಝಾ ಮೊದಲಿಗರು. ನಾಗರಿಕತೆಯ ಅವಳಿ ದೇಶಗಳಾಗಿ ಭಾರತ ಹಾಗೂ ಶ್ರೀಲಂಕಾ ಪರಸ್ಪರ ದೇಶಗಳ ಜನತೆಯ ಸಮೃದ್ಧಿಯ ಉದ್ದೇಶದಿಂದ ಸಂಬಂಧವನ್ನು ಬಲಪಡಿಸಲು ಬದ್ಧ ಎಂಧು ಅವರು ಸ್ಪಷ್ಟಪಡಿಸಿದರು.
ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ನ್ಯಾಷನಲ್ ಪೀಪಲ್ಸ್ ಪವರ್ ಮೈತ್ರಿಕೂಟದ ಮುಖಂಡ ಶ್ರೀಲಂಕಾ ಸರ್ಕಾರದ ಮೊಟ್ಟಮೊದಲ ಎಡಪಂಥೀಯ ನಾಯಕ ಎನಿಸಿಕೊಳ್ಳುವರು. ಶ್ರೀಲಂಕಾ ರಾಜಕೀಯದಲ್ಲಿ ಅಷ್ಟೊಂದು ಹೆಸರು ಮಾಡಿರದಿದ್ದ ದಿಸ್ಸೆನಾಯಕೆ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ ಶೇಕಡ 3ರಷ್ಟು ಮತಗಳನ್ನು ಪಡೆದಿದ್ದರು. ಅವರು ಈ ಬಾರಿ ಭಾರತ ಪರವಾಗಿದ್ದ ವಿರೋಧ ಪಕ್ಷದ ಮುಖಂಡ ಸಜೀತ್ ಪ್ರೇಮದಾಸ ಅವರನ್ನು ಸೋಲಿಸಿದರು. ಯಾವುದೇ ಅಭ್ಯರ್ಥಿ ಶೇಕಡ 50ಕ್ಕಿಂತ ಹೆಚ್ಚು ಮತ ಪಡೆಯಲಿಲ್ಲ. ಅಂತಿಮವಾಗಿ ಶೇಕಡ 42.31 ಮತಗಳೊಂದಿಗೆ ದಿಸ್ಸನಾಯಕೆ ಜಯ ಗಳಿಸಿದರು.
ಶ್ರೀಲಂಕಾ ಚುನಾವಣೆಯನ್ನು ಭಾರತ ಪಕ್ಷಪಾತರಹಿತವಾಗಿ ಅನುಸರಿಸಿದ್ದು, ಉಭಯ ದೇಶಗಳ ಸಂಬಂಧದ ನಿರಂತರತೆ ದೃಷ್ಟಿಯಿಂದ ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅಥವಾ ಪ್ರೇಮದಾಸ ಗೆಲ್ಲಬೇಕು ಎಂಬ ಭಾವನೆಯನ್ನು ಹೊಂದಿತ್ತು. ಹಿಂದೂ ಮಹಾಸಾಗರದ ನೆರೆಯ ದೇಶಕ್ಕೆ ಸಂಕಷ್ಟದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿದ ಕಾರಣದಿಂದ ಸೃಷ್ಟಿಯಾದ ಸದ್ಭಾವನೆಯ ಆಧಾರದಲ್ಲಿ ಸಂಬಂಧ ದೃಢಪಡಿಸಲು ಭಾರತಕ್ಕೆ ಅವಕಾಶ ಇತ್ತು ಎಂದು ಹೇಳಲಾಗಿದೆ.